ADVERTISEMENT

ತುಮಕೂರು | ಯುಪಿಐ ಬಳಸಿ: ₹7 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 2:54 IST
Last Updated 6 ಅಕ್ಟೋಬರ್ 2025, 2:54 IST
ಸೈಬರ್‌ ಕ್ರೈಮ್‌
ಸೈಬರ್‌ ಕ್ರೈಮ್‌   

ತುಮಕೂರು: ನಗರದ ಮೆಳೆಕೋಟೆಯ ಉದ್ಯಮಿ ಇದಾಯತ್‌ ಉಲ್ಲಾ ಖಾನ್‌ ಫೋನ್‌ ಪೇ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ ₹7.87 ಲಕ್ಷ ವರ್ಗಾವಣೆಯಾಗಿದ್ದು, ಈ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನ್ನ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡುವಾಗ ಫೋನ್‌ ಪೇ ಬಳಕೆಯಾಗಲಿಲ್ಲ. ಪರಿಶೀಲಿಸಿದಾಗ ಸೆ. 18ರಿಂದ 23ರ ವರೆಗೆ 137 ಬಾರಿ ಫೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿಯಿತು. ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30ರ ಅವಧಿಯಲ್ಲಿ ಹಣ ವರ್ಗಾವಣೆಯಾಗಿದೆ. ಒಟ್ಟು ₹7,87,558 ಕಡಿತವಾಗಿದೆ’ ಎಂದು ಇದಾಯತ್‌ ಉಲ್ಲಾ ಖಾನ್‌ ದೂರು ನೀಡಿದ್ದಾರೆ.

ಫೋನ್‌ ಪೇ ಬಳಸಿ ವಿವಿಧ ಯುಪಿಐ ಐ.ಡಿಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಫ್ಲಿಪ್‌ಕಾರ್ಟ್‌ ಹೆಸರಲ್ಲಿ ವಂಚನೆ: ಮನೆಯಲ್ಲಿ ಇದ್ದುಕೊಂಡೇ ಫ್ಲಿಪ್‌ಕಾರ್ಟ್‌ನ ಉತ್ಪನ್ನಗಳಿಗೆ ರಿವ್ಯೂ ನೀಡುತ್ತಾ, ಹೆಚ್ಚಿನ ಕಮಿಷನ್‌ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯ ಯಲ್ಲಾಪುರದ ಎನ್‌.ಕುಮಾರಸ್ವಾಮಿ ₹6 ಲಕ್ಷ ಕಳೆದುಕೊಂಡಿದ್ದಾರೆ.

ವಾಟ್ಸ್‌ ಆ್ಯಪ್‌ನಲ್ಲಿ ಮೆಸೇಜ್‌ ಮಾಡಿದ ವಂಚಕರು ಹಣ ಗಳಿಕೆ ಬಗ್ಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಮೊದಲಿಗೆ ₹1 ಸಾವಿರ ಹೂಡಿಕೆ ಮಾಡಿದ್ದು, ಅದನ್ನು ಮತ್ತೆ ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿ ಒಟ್ಟು ₹6,04,800 ವರ್ಗಾಯಿಸಿದ್ದು, ಇದರಲ್ಲಿ ₹1,600 ಮಾತ್ರ ವಾಪಸ್‌ ಬಂದಿದೆ. ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.