ತಿಪಟೂರು: ನಗರ ಹಾಗೂ ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಯೂರಿಯಾ ದೊರೆಯದ ಕಾರಣ ರೈತರು ಪರದಾಡುತ್ತಿದ್ದು, ಸರ್ಕಾರಿ ಸಂಘಗಳಲ್ಲೇ ಗೊಬ್ಬರ ಕೊರತೆಯಿಂದ ರೈತರು ಖಾಸಗಿ ಕೃಷಿ ಕೇಂದ್ರಗಳಿಗೆ ಮುಗಿಬಿದ್ದರು.
ನಗರದ ಅಮರ್‌ನಾಥ್ ಕೃಷಿ ಕೇಂದ್ರದಲ್ಲಿ ಯೂರಿಯಾಕ್ಕಾಗಿ ನೂರಾರು ರೈತರು ತಾಸುಗಟ್ಟಲೇ ಮಳೆ ನಡುವೆಯೇ ಸಾಲಿನಲ್ಲಿ ನಿಂತಿದ್ದರು.
ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಯೂರಿಯಾ ಸಿಗದ ಕಾರಣ ಹಾಗೂ ಮಳೆ ಸ್ವಲ್ಪ ಬಿಡುವು ಕೊಟ್ಟ ಕಾರಣ ರಾಗಿ ಬಿತ್ತನೆ ಹಾಗೂ ಮೇಲುಗೊಬ್ಬರವಾಗಿ ಬಳಸಲು ಯೂರಿಯಾಕ್ಕೆ ಮುಗಿಬಿದ್ದರು. ಆದರೆ ಸರಬರಾಜು ಕುಂಠಿತಗೊಂಡಿರುವುದರಿಂದ ರೈತರ ಕೋಪ ಹಾಗೂ ಹತಾಶೆ ಹೆಚ್ಚುತ್ತಿದೆ. ಸರ್ಕಾರಿ ಸಹಕಾರ ಸಂಘಗಳು ಗೊಬ್ಬರ ಪೂರೈಸಲು ವಿಫಲವಾಗಿರುವುದರಿಂದ ದುಪ್ಪಟ್ಟ ಬೆಲೆಗೆ ಮಾರಾಟ ಮಾಡಿದರು.
ಒಂದು ಆಧಾರ್ ಕಾರ್ಡ್‌ಗೆ ಕೇವಲ ಎರಡು ಚೀಲ ಗೊಬ್ಬರ ನೀಡಲಾಗುತ್ತಿದ್ದು, ಪ್ರತಿ ಚೀಲದ ಬೆಲೆ ₹300 ನಿಗದಿಪಡಿಸಲಾಗಿದೆ. ಗೊಬ್ಬರ ಕೊರತೆಯಿಂದಾಗಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದು, ತಕ್ಷಣವೇ ಸರಬರಾಜು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಯೂರಿಯಾ ಸಿಗುತ್ತದೆ ಎಂದು ತಿಳಿದಾಗ ಆತುರದಲ್ಲಿ ಬಂದು ಸಾಲಿನಲ್ಲಿ ನಿಂತಿದ್ದು ಕೇವಲ ಎರಡು ಚೀಲಗಳನ್ನು ನೀಡುತ್ತಿದ್ದಾರೆ. ದೊಡ್ಡ ಪ್ರಮಾಣದ ರೈತರಿಗೆ ತೊಂದರೆಯಾಗುತ್ತಿದೆ. ನಾವುಗಳು ಹೊಲದಲ್ಲಿ ಕೆಲಸ ಮಾಡಬೇಕೊ, ರಸಗೊಬ್ಬರಕ್ಕಾಗಿ ಅಲೆಯಬೇಕೊ ಗೊತ್ತಿಲ್ಲ’ ಎನ್ನುತ್ತಾರೆ ಸಾಸಲು ಬಸವರಾಜು.
‘ರೈತನ ಹೊಲ ಹಸಿರಾಗಬೇಕಾದರೆ ಮೊದಲು ಸರ್ಕಾರದ ಮನಸ್ಸು ಹಸಿರಾಗಬೇಕು. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಪ್ರತಿ ವರ್ಷವೂ ರೈತರು ರಸಗೊಬ್ಬರಕ್ಕೆ ಅಲೆದಾಡಬೇಕಿದೆ. ಸಹಕಾರ ಸಂಘಗಳು ಹೆಸರಿಗಷ್ಟೇ ರೈತರ ಬೆಂಬಲಕ್ಕಿದೆ ಎಂದು ಹೇಳುತ್ತಾರೆ. ಕೃಷಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡಿದರೆ ಯಾವುದೇ ಅನಾಹುತಗಳು ಇರುವುದಿಲ್ಲ’ ಎಂದು ಹೊಲದಮನೆ ಹರೀಶ್ ಹೇಳಿದರು.
ಪ್ರತಿ ರೈತ ರಸಗೊಬ್ಬರ ಪಡೆದಾಗ ಬಿಲ್ ಪಡೆಯಬೇಕು. ಒಂದು ಎಕರೆ ರಾಗಿಗೆ 22 ಕೆ.ಜಿ ಅಗತ್ಯ. ಈಗಾಗಲೇ ಸಾರ್ಥವಳ್ಳಿ ಬುರಡೇಘಟ್ಟ ಹಾಲ್ಕುರಿಕೆ ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿದೆ. ಗೊಬ್ಬರಕ್ಕೆ ಯಾವುದೇ ತೊಂದರೆಯಿಲ್ಲ.ಪವನ್ ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.