ADVERTISEMENT

ತುಮಕೂರು: ಎಲ್ಲೆಡೆ ವೈಕುಂಠನ ಸ್ಮರಣೆ

ವೈಕುಂಠ ಏಕಾದಶಿ: ದೇವಸ್ಥಾನಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 6:13 IST
Last Updated 24 ಡಿಸೆಂಬರ್ 2023, 6:13 IST
ತುಮಕೂರಿನ ಬಟವಾಡಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು
ತುಮಕೂರಿನ ಬಟವಾಡಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು   

ತುಮಕೂರು: ವೈಕುಂಠ ಏಕಾದಶಿಯ ಅಂಗವಾಗಿ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ದೇವಸ್ಥಾನಗಳನ್ನು ವಿವಿಧ ಹೂವುಗಳು, ಬಾಳೆ ದಿಂಡುಗಳಿಂದ ಸಿಂಗರಿಸಲಾಗಿತ್ತು. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ವೈಕುಂಠ ದ್ವಾರದ ಪ್ರವೇಶ ಮತ್ತು ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಎಲ್ಲ ದೇವಾಲಯಗಳು ಭಕ್ತರಿಂದ ಭರ್ತಿಯಾಗಿದ್ದವು. ನಗರದ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಏಕಾದಶಿಯ ಪ್ರಯುಕ್ತ ಪ್ರಮುಖ ದೇಗುಲಗಳಲ್ಲಿ ಬೆಳಗಿನ ಜಾವದಿಂದ ಪಂಚಾಮೃತ ಅಭಿಷೇಕ, ಸಹಸ್ರನಾಮ ಅರ್ಚನೆ, ವಿಶೇಷ ಅಲಂಕಾರ, ಮಹಾಭಿಷೇಕ, ಉತ್ಸವ ಮೂರ್ತಿಯ ಮೆರವಣಿಗೆ, ಪ್ರಾಕಾರೋತ್ಸವ ಹಾಗೂ ಇತರೆ ಕಾರ್ಯಕ್ರಮಗಳು ನೆರವೇರಿದವು.

ADVERTISEMENT

ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇವಾಲಯ, ತಿರುಮಲ ನಗರ ದಕ್ಷಿಣದ ಕೆ.ಎಚ್.ಬಿ ಕಾಲೊನಿಯಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲ, ಸರಸ್ವತಿಪುರಂನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವೈಕುಂಠ ದ್ವಾರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತುಮಕೂರಿನ ಪದ್ಮಾವತಿ ವೆಂಕಟೇಶ್ವರಸ್ವಾಮಿ ದೇವಾಲಯದ ಬಳಿ ಶನಿವಾರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು

ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲರು ದೇವರ ದರ್ಶನಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಕೊರೆಯುವ ಚಳಿಯ ಮಧ್ಯೆ ಬೆಳಗಿನ ಜಾವವೇ ದೇಗುಲಗಳಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.