ತುಮಕೂರು: ‘ನಮ್ಮ ಯಾತ್ರಿ ಆಟೊ’ ಚಾಲಕರು ‘ನಮ್ಮ ಯಾತ್ರಿ ನಮ್ಮ ವನ’ ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು ನೆಟ್ಟು, ಟ್ರೀ ಗಾರ್ಡ್ ಅಳವಡಿಸಿ ಬೆಳೆಸುವ ಕಾರ್ಯಕ್ರಮಕ್ಕೆ ನಗರದ ಅಮಾನಿಕೆರೆ ಅಂಗಳದಲ್ಲಿ ಶನಿವಾರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ತಮ್ಮ ದುಡಿಮೆಯೊಂದಿಗೆ ನಾಗರಿಕರಿಗೆ ಸೇವೆ ಮಾಡುತ್ತಿದ್ದೇವೆ ಎಂಬ ಅಭಿಮಾನವೂ ಆಟೊ ಚಾಲಕರಿಗೆ ಇರಬೇಕಾಗುತ್ತದೆ. ನಗರ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ನಗರದ ಸ್ವಚ್ಛತೆ ಹಾಗೂ ಹಸಿರು ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಮ್ಮ ಯಾತ್ರಿ ಆಟೊ ಚಾಲಕರು ಗಿಡ ನೆಟ್ಟು ಬೆಳೆಸುವಂತಹ ಕಾರ್ಯ ಕೈಗೊಂಡಿರುವುದು ಉತ್ತಮ ಕೆಲಸ ಎಂದು ಜ್ಯೋತಿಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆಟೊ ಚಾಲಕರ ಕಾರ್ಯ ಇತರರಿಗೂ ಪ್ರೇರಣೆಯಾಗಬೇಕಿದೆ. ನಗರದ ನಾಗರಿಕರ ಮೂಲಭೂತ ಸೌಲಭ್ಯಗಳಲ್ಲಿ ಆಟೊ ಸೇವೆಯೂ ಒಂದು. ವಯೋವೃದ್ಧರು, ರೋಗಿಗಳ ತುರ್ತು ಪ್ರಯಾಣಕ್ಕೆ ಆಟೊ ಚಾಲಕರು ಸಹಕಾರ ನೀಡಬೇಕು ಎಂದರು.
ಮಾಜಿ ಸಚಿವ ಸೊಗಡು ಶಿವಣ್ಣ, ಪತ್ರಕರ್ತ ಎಸ್.ನಾಗಣ್ಣ, ನಮ್ಮ ಯಾತ್ರಿಯ ತಾಂತ್ರಿಕ ಸಲಹೆಗಾರರಾದ ರಾಜೀವ್, ಸುಶೀಲ್, ಮುರಳಿ, ತುಮಕೂರು ರಾಯಭಾರಿ ಆರ್.ನವೀನ್ ಕುಮಾರ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.