
ತುಮಕೂರು: ತರಕಾರಿ, ಸೊಪ್ಪು ದರ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದ್ದರೂ ಕೆಲವು ತುಸು ಇಳಿಕೆಯಾಗಿವೆ. ಬೇಳೆ, ಧಾನ್ಯ, ಒಣ ಮೆಣಸಿನಕಾಯಿ ಸೇರಿದಂತೆ ಮಸಾಲೆ ಪದಾರ್ಥಗಳು ಏರಿಕೆಯತ್ತ ಸಾಗಿವೆ. ಹಣ್ಣುಗಳ ಬೆಲೆಯೂ ಹೆಚ್ಚಳವಾಗಿದೆ. ಮೀನು ಮತ್ತಷ್ಟು ಅಗ್ಗವಾಗಿದ್ದು, ಕೋಳಿ ಮಾಂಸವೂ ಕಡಿಮೆಯಾಗಿದೆ.
ತರಕಾರಿ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕೆಲವು ಮಾತ್ರ ಅಲ್ಪ ಇಳಿಕೆ ಕಂಡಿವೆ. ಗಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಹಾಗಲಕಾಯಿ, ಕ್ಯಾಪ್ಸಿಕಂ ಕೊಂಚ ಕಡಿಮೆಯಾಗಿದೆ. ನುಗ್ಗೆಕಾಯಿ, ಈರುಳ್ಳಿ, ಬೆಳ್ಳುಳ್ಳಿ ಮತ್ತಷ್ಟು ದುಬಾರಿಯಾಗಿದೆ. ಹೂ ಕೋಸು ₹50ಕ್ಕೆ ಜಿಗಿದಿದೆ. ಮುಂದಿನ ಕೆಲವು ವಾರ ಬೆಲೆ ಇಳಿಕೆಯಾಗುವುದು ಕಷ್ಟಕರ. ಡಿಸೆಂಬರ್ ವೇಳೆಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಪಾಲಕ್ ತುಟ್ಟಿ: ಕೊತ್ತಂಬರಿ ಸೇರಿದಂತೆ ಇತರೆ ಸೊಪ್ಪಿನ ಬೆಲೆ ಕಡಿಮೆಯಾಗಿದ್ದರೆ, ಪಾಲಕ್ ಸೊಪ್ಪು ಗಗನಮುಖಿಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹50–60ಕ್ಕೆ ಇಳಿದಿದ್ದರೆ, ಪಾಲಕ್ ಸೊಪ್ಪು (ಕಟ್ಟು) ₹80ಕ್ಕೆ ಏರಿಕೆಯಾಗಿದೆ.
ದಾಳಿಂಬೆ ದುಬಾರಿ: ದಾಳಿಂಬೆ ಹಣ್ಣು ಮತ್ತಷ್ಟು ದುಬಾರಿಯಾಗಿದ್ದು, ಏಲಕ್ಕಿ ಬಾಳೆಹಣ್ಣು, ಕಿತ್ತಳೆ ಹಣ್ಣು ತುಸು ಹೆಚ್ಚಳವಾಗಿದೆ. ಮೂಸಂಬಿ, ಕರಬೂಜ ಅಲ್ಪ ತಗ್ಗಿದೆ. ಚಳಿ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜೂಸ್‌ಗೆ ಬಳಸುವ ಹಣ್ಣುಗಳ ಧಾರಣೆ ಕಡಿಮೆಯಾಗಬಹುದು.
ಅಡುಗೆ ಎಣ್ಣೆ ಏರಿಕೆ: ಪಾಮಾಯಿಲ್ ದರ ತುಸು ತಗ್ಗಿದ್ದರೆ, ಇತರೆ ಎಣ್ಣೆ ತೇಜಿಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹150–152, ಪಾಮಾಯಿಲ್ ಕೆ.ಜಿ ₹118–120, ಕಡಲೆಕಾಯಿ ಎಣ್ಣೆ ಕೆ.ಜಿ ₹165–170ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
ಬೇಳೆ ಧಾನ್ಯ: ಬೇಳೆ, ಧಾನ್ಯಗಳ ಧಾರಣೆ ತುಸು ಏರಿಕೆಯತ್ತ ಸಾಗಿದೆ. ತೊಗರಿಬೇಳೆ, ಕಡಲೆಕಾಳು, ಅಲಸಂದೆ, ಅವರೆಕಾಳು ದರ ಹೆಚ್ಚಳವಾಗಿದ್ದರೆ, ಉದ್ದಿನಬೇಳೆ, ಬಟಾಣಿ, ಬೆಲ್ಲ ಕೊಂಚ ಕಡಿಮೆಯಾಗಿದೆ.
ಮಸಾಲೆ ಪದಾರ್ಥ: ಮೆಣಸಿನಕಾಯಿ, ಜೀರಿಗೆ, ಲವಂಗ ಸೇರಿದಂತೆ ಮಸಾಲೆ ಪದಾರ್ಥಗಳ ಧಾರಣೆ ಸ್ವಲ್ಪ ಮಟ್ಟಿಗೆ ತೇಜಿಯಾಗಿದೆ.
ಧನ್ಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹195–200, ಬೆಲ್ಲ ಕೆ.ಜಿ ₹45–52, ಕಾಳುಮೆಣಸು ಕೆ.ಜಿ ₹740–760, ಜೀರಿಗೆ ಕೆ.ಜಿ ₹240–250, ಚಕ್ಕೆ ಕೆ.ಜಿ ₹250–250, ಲವಂಗ ಕೆ.ಜಿ ₹800–820, ಗುಣಮಟ್ಟದ ಗಸಗಸೆ ಕೆ.ಜಿ ₹1,500–1,600, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹760–800, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹420–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಇಳಿಕೆ: ಕಾರ್ತಿಕ ಮಾಸ ಆರಂಭವಾದ ನಂತರ ಕೋಳಿ ಮಾಂಸದ ಬೆಲೆ ಸ್ವಲ್ಪ ಮಟ್ಟಿಗೆ ಇಳಿದಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಫಾರಂ ಕೋಳಿ ಕೆ.ಜಿ ₹140ಕ್ಕೆ ಇಳಿಕೆಯಾಗಿದೆ. ಮೊಟ್ಟೆ ಒಂದು ₹6.20ಕ್ಕೆ ಏರಿಕೆಯಾಗಿದೆ.
ಮೀನು ಅಗ್ಗ: ಮೀನು ಮತ್ತಷ್ಟು ಅಗ್ಗವಾಗಿದ್ದು, ಹಿಂದಿನ ವಾರಕ್ಕೆ ಹೋಲಿಸಿದರೆ ಕೆಲವು ಮೀನು ಕೆ.ಜಿಗೆ ₹150ರ ವರೆಗೂ ಇಳಿಕೆ ದಾಖಲಿಸಿವೆ. ಬಂಗುಡೆ ಕೆ.ಜಿ ₹220, ಬೂತಾಯಿ ಕೆ.ಜಿ ₹280, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹940, ಬಿಳಿಮಾಂಜಿ ಕೆ.ಜಿ 1,200, ಕಪ್ಪುಮಾಂಜಿ ₹880, ಇಂಡಿಯನ್ ಸಾಲ್ಮನ್ ₹1,000, ಸೀಗಡಿ ಕೆ.ಜಿ ₹500–780, ಏಡಿ ಕೆ.ಜಿ ₹880ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.