ADVERTISEMENT

‘ವಿದ್ಯಾಗಮ’ದತ್ತ ವಿದ್ಯಾರ್ಥಿಗಳ ಚಿತ್ತ

ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕ ಪ್ರಯತ್ನ, ಅಭಿಪ್ರಾಯ ಸಂಗ್ರಹ

ಅನಿಲ್ ಕುಮಾರ್ ಜಿ
Published 3 ಆಗಸ್ಟ್ 2020, 6:03 IST
Last Updated 3 ಆಗಸ್ಟ್ 2020, 6:03 IST
ರಂಗದಾಸಪ್ಪ
ರಂಗದಾಸಪ್ಪ   

ತುಮಕೂರು: ಕೊರೊನಾ ಕಾರಣದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗುವುದು ತಡವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ‘ವಿದ್ಯಾಗಮ’ ಕಲಿಕಾ ಕ್ರಮದ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸುತ್ತಿದ್ದು, ಇದಕ್ಕೆ ಜಿಲ್ಲೆಯಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲೆಗಳು ಸದ್ಯ ಆರಂಭವಾಗುವ ಮುನ್ಸೂಚನೆಗಳಿಲ್ಲ. ಈ ನಡುವೆ ಹೆಚ್ಚಿನ ವಿದ್ಯಾರ್ಥಿಗಳು ಚಂದನ ವಾಹಿನಿಯ ಪಾಠಗಳಿಗೆ ಕಿವಿಗೊಡುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಗೆ ಒಳಪಡಿಸಲು ಶಿಕ್ಷಣ ತಜ್ಞರ ವರದಿ ಆಧರಿಸಿ ‘ವಿದ್ಯಾಗಮ’ ಎಂಬ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲೂ ಅಭಿಪ್ರಾಯ ಕ್ರೋಡೀಕರಿಸುತ್ತಿದೆ.

ಅದರಂತೆ ಜಿಲ್ಲೆಯಲ್ಲಿ ಈಗಾಗಲೇ ‘ವಿದ್ಯಾಗಮ’ ಯೋಜನೆಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಪ್ರಕ್ರಿಯೆ ನಡೆಯುತ್ತಿದೆ. ಪೋಷಕರು, ಶಿಕ್ಷಕರು ಹಾಗೂ ಮಕ್ಕಳಿಂದಲೂಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳನ್ನುಕ್ರೋಡೀಕರಿಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲು ತುಮಕೂರು ಮತ್ತು ಮಧುಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿವೆ.

ADVERTISEMENT

ಏನಿದು ‘ವಿದ್ಯಾಗಮ’ ಕಲಿಕೆ?: 1ರಿಂದ 5, 6ರಿಂದ 8 ಹಾಗೂ 9 ಮತ್ತು 10ನೇ ತರಗತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಕನಿಷ್ಠ 20ರಿಂದ 25 ವಿದ್ಯಾರ್ಥಿಗಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇವರಿಗೆ ‘ಇಂಟಲಿಜೆಂಟ್‌ ಕೊಠಡಿ’, ‘ಬ್ರಿಲಿಯೆಂಟ್‌ ಕೊಠಡಿ’ ಹಾಗೂ ‘ಜೀನಿಯಸ್‌ ಕೊಠಡಿ’ ಎಂದು ವಿಭಾಗ ಮಾಡಲಾಗುತ್ತದೆ.

‘ಇಂಟೆಲಿಜೆಂಟ್‌ ಕೊಠಡಿ’ಯಲ್ಲಿ ಆಂಡ್ರಾಯಿಡ್‌ ಫೋನ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಇಂಟರ್‌ನೆಟ್ ಸೌಲಭ್ಯವುಳ್ಳ ಮಕ್ಕಳನ್ನು ಗುರುತಿಸಿ ಅವರಿಗೆ ಆನ್‌ಲೈನ್‌ ಮೂಲಕ ಬೋಧನೆ ಮಾಡುವುದು. ‘ಬ್ರಿಲಿಯೆಂಟ್‌’ ಕೊಠಡಿಯಲ್ಲಿ ಮೊಬೈಲ್‌ ಇದ್ದು, ಇಂಟರ್‌ನೆಟ್‌ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಬಗ್ಗೆ ಎಸ್‌ಎಂಎಸ್‌ ಅಥವಾ ಫೋನ್‌ ಕರೆಮಾಡಿ ಕಲಿಕೆಗೆ ಪ್ರೇರೇಪಿಸಲಾಗುತ್ತದೆ.

ಇನ್ನೂ ‘ಜೀನಿಯಸ್‌ ಕೊಠಡಿ’ಯಲ್ಲಿ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಇಂಟರ್‌ನೆಟ್ ಸೇರಿದಂತೆ ಯಾವುದೇ ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಪ್ರತಿ ವಾರ ಅವರು ಇರುವ ಸ್ಥಳಕ್ಕೆ ಮಾರ್ಗದರ್ಶಿ ಶಿಕ್ಷಕರು ಭೇಟಿ ನೀಡಿ ಪಾಠ, ಪ್ರವಚನಗಳನ್ನು ನಡೆಸುವರು. ನಿಯೋಜಿತ ಕಾರ್ಯಗಳನ್ನು ನೀಡಲಿದ್ದಾರೆ. ಈ ಮೂರು ಪ್ರಕ್ರಿಯೆಯೂ ಜಿಲ್ಲೆಯಲ್ಲಿ ನಡೆಯುತ್ತಿದೆ. ವಿವಿಧ ಅಂಶಗಳ ಆಧಾರಿತ ಬೋಧನೆ, ಕಲಿಕಾ ಸಾಮಗ್ರಿ, ಆಡಿಯೊ, ವಿಡಿಯೊ ಸಿದ್ಧತೆ ನಡೆದಿದೆ.

ಉತ್ತಮ ಪ್ರತಿಕ್ರಿಯೆ

ತುಮಕೂರು ಜಿಲ್ಲೆಯಲ್ಲಿ ‘ವಿದ್ಯಾಗಮ’ ಯೋಜನೆಗೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಪ್ರಕ್ರಿಯೆ ನಡೆಯುತ್ತಿದೆ. ಪೋಷಕರು, ಶಿಕ್ಷಕರು ಹಾಗೂ ಮಕ್ಕಳಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗುವುದು. ಮಕ್ಕಳು ಕಲಿಕೆಯಿಂದ ದೂರ ಉಳಿಯದಿರಲಿ ಎಂಬ ಕಾರಣಕ್ಕಾಗಿ ಇಲಾಖೆ ಅನುಷ್ಠಾನಕ್ಕೆ ತಂದಿರುವ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ. ಬಿಸಿಯೂಟ ಪಡಿತರ, ಪಠ್ಯಪುಸ್ತಕಗಳನ್ನು ಮಕ್ಕಳಿಗೆ ತಲುಪಿಸಲಾಗುತ್ತಿದೆ ಎಂದು ಡಿಡಿಪಿಐ ಕಚೇರಿಯ ಬಿಇಒ ರಂಗದಾಸಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.