ADVERTISEMENT

ವಿಜಯ ಸಂಕಲ್ಪಕ್ಕೆ ಸಿಎಂ ಚಾಲನೆ- ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 15:16 IST
Last Updated 21 ಜನವರಿ 2023, 15:16 IST
ತುಮಕೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು
ತುಮಕೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು   

ತುಮಕೂರು: ನಗರದ ಅಶೋಕ ನಗರದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು.

ಮನೆ ಮನೆಗೆ ಬಿಜೆಪಿ ಸಾಧನೆಯ ಕರಪತ್ರ ಹಂಚಿದರು. ಬಾಯರ್ಸ್‌ ಕ್ಯಾಂಟೀನ್‌ನ ಗೋಡೆ ಮೇಲೆ ಕಮಲದ ಚಿತ್ರ ಗೀಚಿದರು. ಹೋಟೆಲ್ ಮತ್ತು ಅಂಗಡಿಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜನಸಂಕಲ್ಪ ಯಾತ್ರೆಯನ್ನು ವಿಜಯ ಸಂಕಲ್ಪ ಯಾತ್ರೆಯನ್ನಾಗಿ ಮಾಡಿದ್ದೇವೆ. ಮಿಸ್ಡ್‌ ಕಾಲ್‌ ಕೊಡುವ ಮೂಲಕ ಸದಸ್ಯತ್ವ ನವೀಕರಣ, ನೋಂದಣಿ ಮಾಡಿಕೊಳ್ಳಬಹುದು. ಇದರಿಂದ ಪಕ್ಷ ಸಂಘಟನೆಗೆ ಬಲ ಬರುತ್ತದೆ. ಜನರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಮಾಡುತ್ತೇವೆ. ರಾಜ್ಯ ಹಾಗೂ ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದರು.

ADVERTISEMENT

ಬೀದಿ ಬದಿ ವ್ಯಾಪಾರಸ್ಥರಿಗೆ ಒಟ್ಟು ₹5 ಲಕ್ಷ ಸಾಲ ಕೊಡಲು ತೀರ್ಮಾನ ಮಾಡಲಾಗಿದೆ. ಕೂಲಿ ಕಾರ್ಮಿಕರಿಗೆ ವಿಶೇಷ ಒತ್ತು ಕೊಡಲಾಗುವುದು. ದೀನ‌ ದಲಿತರಿಗಾಗಿ ನೂರು ಹಾಸ್ಟೆಲ್‌ಗಳು, ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಡಾ.ಸಿ.ಎಂ. ರಾಜೇಶ್‍ಗೌಡ, ಮಸಾಲೆ ಜಯರಾಂ, ಜಿ.ಬಿ. ಜ್ಯೋತಿ ಗಣೇಶ್, ವಿಧಾನ ಪರಿಷತ್‌ ಸದಸ್ಯ ನವೀನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ರವಿಶಂಕರ್, ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ, ಮುಖಂಡರಾದ ಸೊಗಡು ಶಿವಣ್ಣ, ಡಾ.ಎಂ.ಆರ್‌. ಹುಲಿನಾಯ್ಕರ್‌, ಹನುಮಂತರಾಜು, ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ ಇದ್ದರು.

**

ರಸ್ತೆ ಬಂದ್‌: ಸಾರ್ವಜನಿಕರ ಪರದಾಟ

ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿ.ಎಚ್‌. ರಸ್ತೆ ಪಕ್ಕದಲ್ಲಿಯೇ ವೇದಿಕೆ ಸಿದ್ಧಪಡಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸುವುದಕ್ಕೂ ಮುನ್ನ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು.

ಕ್ಯಾತ್ಸಂದ್ರದಿಂದ ಎಸ್‌.ಎಸ್‌. ವೃತ್ತದ ಕಡೆಗೆ ಬರುವ ವಾಹನ ಸವಾರರು ಟ್ರಾಫಿಕ್‌ ಸಮಸ್ಯೆ ಅನುಭವಿಸಿದರು. ರಸ್ತೆ ದಾಟಲು ಹರಸಾಹಸಪಟ್ಟರು. ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿಯೇ ವೇದಿಕೆ ನಿರ್ಮಾಣ ಮಾಡಲು ಅವಕಾಶ ಕೊಟ್ಟವರು ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.