ಕುಣಿಗಲ್: ‘ಹಲವು ಗೊಂದಲಗಳ ನಡುವೆ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆತುರವಾಗಿ ವರದಿ ಪಡೆದು ಒಕ್ಕಲಿಗರ ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ನಂಜಾವಧೂತ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಮಾಹಿತಿ ಮತ್ತು ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ಹಠಕ್ಕೆ ಬಿದ್ದು ಸಮೀಕ್ಷೆ ಮಾಡುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಶೇ 70ರಷ್ಟು ಮುಗಿದಿದ್ದರೂ, ಗೊಂದಲಗಳು ನಿವಾರಣೆಯಾಗಿಲ್ಲ. ಸಮೀಕ್ಷೆ ವರದಿ ರಾಜಕೀಯ ಮೀಸಲಾತಿಗೆ ಪೂರಕವಾಗಿದ್ದು, ಸರ್ಕಾರಕ್ಕೆ ಸಮೀಕ್ಷೆ ಮುಗಿಸಿ ವರದಿ ಪಡೆಯಲು ಆತುರ ಯಾಕೆ? ಒಂದು ವೇಳೆ ವರದಿ ಆಧರಿಸಿ ಒಕ್ಕಲಿಗರ ಶೇ 4 ಮೀಸಲಾತಿಗೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಮುಖ್ಯಮಂತ್ರಿ ತಮ್ಮ ಸಮುದಾಯದವರಿಗೆ ‘ಕುರುಬ’ ಎಂದು ಮಾತ್ರ ಬರೆಸಲು ಸೂಚನೆ ನೀಡಿದ್ದಾರೆ. ಆದರೆ ಕೆಲ ಒಕ್ಕಲಿಗರು ಪ್ರತಿಷ್ಠಯಿಂದಾಗಿ ಸಮೀಕ್ಷೆಯ ಸೂಕ್ಷ್ಮಗಳ ಅರಿವಿಲ್ಲದೆ ಮಾಹಿತಿ ನೀಡುತ್ತಿದ್ದಾರೆ. ಸಮೀಕ್ಷೆಯ ನೂನ್ಯತೆಗಳನ್ನು ಸರಿಪಡಿಸಿ, ಸಮೀಕ್ಷೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದರು.
ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರು ಸಮೀಕ್ಷಗೆ ಸಮರ್ಪಕ ಮಾಹಿತಿ ನೀಡದಿದ್ದರೆ, ಇಡೀ ಸಮುದಾಯಕ್ಕೆ ಮಾರಕವಾಗುತ್ತದೆ. ನಿರಂತರ ರಜೆಗಳ ಪ್ರಯುಕ್ತ ಬಹುತೇಕ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿಲ್ಲ. ಅಪೂರ್ಣವಾದ ಸಮೀಕ್ಷೆಯನ್ನು ಸಂಪೂರ್ಣಗೊಳಿಸಲು ಇನ್ನೂ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿ ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆ ಮೂಲಕ ಆಟ ಆಡಿಸುತ್ತಿದ್ದಾರೆ. ಒಕ್ಕಲಿಗ, ಲಿಂಗಾಯತ ಶಾಸಕರು ಅವರ ಆಟಕ್ಕೆ ವಿರೋಧ ವ್ಯಕ್ತಪಡಿಸದೆ ಕೈಜೋಡಿಸಿದ್ದಾರೆ ಮುಂದಿನ ದಿನಗಳಲ್ಲಿ ಆಟ ಮುಂದುವರೆಯಲಿದೆ ಕಾದು ನೋಡಿ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯಾವ ಜಾತಿಯರಿಗೂ ಅನ್ಯಾಯವಾಗದಂತೆ ಕಾರ್ಯನಿರ್ವಹಿಸುತ್ತಾರೆ ಸಹಕರಿಸಿ ಎಂದರು.
ಆದಿ ಚುಂಚನಗಿರಿ ಮಠದ ಪ್ರಸನ್ನಾಂದ ನಾಥ ಸ್ವಾಮೀಜಿ, ಮಂಗಳನಾಂದ ಸ್ವಾಮೀಜಿ, ಮಾಜಿ ಸಚಿವ ಡಿ.ನಾಗರಾಜಯ್ಯ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೋನಪ್ಪ ಗೌಡ, ಹನುಮಂತರಾಯಪ್ಪ, ನಿರ್ದೇಶಕ ಲೋಕೇಶ್ ಡಿ.ನಾಗರಾಜಯ್ಯ, ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್, ಬಿಜೆಪಿ ಮುಖಂಡ ರಾಜೇಶ್ ಗೌಡ ಪಾಲ್ಗೊಂಡಿದ್ದರು.
ಉಪಜಾತಿ ಬರೆಸಲು ಮನವಿ
ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಗಣ್ಯರು ಸಮೀಕ್ಷೆಯಲ್ಲಿ ‘ಒಕ್ಕಲಿಗ’ ಎಂದೇ ಬರೆಸುವಂತೆ ಮನವಿ ಮಾಡಿದರೆ ಅರೆಶಂಕರ ಮಠದ ಸಿದ್ದರಾಮ ಚೈತನ್ಯಸ್ವಾಮೀಜಿ ಒಕ್ಕಲಿಗರು ತಮ್ಮ ಉಪ ಜಾತಿಗಳ ಅಸ್ಥಿತ್ವಕ್ಕೆ ಮತ್ತು ಮೀಸಲಾತಿಗಾಗಿ ಉಪ ಜಾತಿಗಳ ಹೆಸರು ಬರೆಸುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.