ADVERTISEMENT

ತುಮಕೂರು: ಒಕ್ಕಲಿಗ ಎಂದೇ ಬರೆಸಲು ಸ್ವಾಮೀಜಿಗಳ ಸಲಹೆ

ಒಟ್ಟಾಗಿ ಸಾಗಲು ಸ್ವಾಮೀಜಿಗಳ ಸಮ್ಮುಖದಲ್ಲಿ ಸಹಮತ; ಒಳ ಪಂಗಡ ಮರೆಯಿರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:41 IST
Last Updated 19 ಸೆಪ್ಟೆಂಬರ್ 2025, 4:41 IST
ತುಮಕೂರಿನಲ್ಲಿ ಗುರುವಾರ ಒಕ್ಕಲಿಗ ಸಮುದಾಯದ ಮುಖಂಡರ ಸಭೆ ನಡೆಯಿತು. ನಂಜಾವಧೂತ ಸ್ವಾಮೀಜಿ, ಪ್ರಸನ್ನಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ಎಚ್.ಡಿ.ರಂಗನಾಥ್ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಗುರುವಾರ ಒಕ್ಕಲಿಗ ಸಮುದಾಯದ ಮುಖಂಡರ ಸಭೆ ನಡೆಯಿತು. ನಂಜಾವಧೂತ ಸ್ವಾಮೀಜಿ, ಪ್ರಸನ್ನಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ಎಚ್.ಡಿ.ರಂಗನಾಥ್ ಇತರರು ಭಾಗವಹಿಸಿದ್ದರು   

ತುಮಕೂರು: ಒಕ್ಕಲಿಗ ಸಮುದಾಯದವರು ತಮ್ಮ ಉಪ ಜಾತಿ, ಉಪ ಪಂಗಡಗಳನ್ನು ಮರೆತು ಒಟ್ಟಾಗಿ ಸಾಗುವ ಬಗ್ಗೆ ಸಮುದಾಯದ ಸ್ವಾಮೀಜಿಗಳು, ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ಜಾತಿ ಜನ ಗಣತಿ ಸಮಯದಲ್ಲಿ ಜಾತಿ ಕಾಲಂನಲ್ಲಿ ‘ಒಕ್ಕಲಿಗ’ ಎಂದೇ ಬರೆಸುವಂತೆ ಸಮುದಾಯದ ಸ್ವಾಮೀಜಿಗಳು ಸಲಹೆ ಮಾಡಿದರು. ಅದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು.

ನಗರದಲ್ಲಿ ಗುರುವಾರ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಹಾಗೂ ಸಮುದಾಯದ ಇತರೆ ಮುಖಂಡರ ನೇತೃತ್ವದಲ್ಲಿ ನಡೆದ ಒಕ್ಕಲಿಗರ ಜಾಗೃತಿ ಸಭೆಯಲ್ಲಿ ಸಮುದಾಯದ ಒಗ್ಗಟ್ಟಿನ ಮಂತ್ರ ಜಪಿಸಲಾಯಿತು.

ADVERTISEMENT

ಕೇಂದ್ರ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪ್ರಮುಖರು ಒಗ್ಗಟ್ಟಿನ ಹಿತನುಡಿಗಳನ್ನಾಡಿದರು. ಹಿಂದೆ ಆಗಿರುವ ಕಹಿ ಘಟನೆಗಳನ್ನು ಮರೆತು ಒಗ್ಗೂಡುವಂತೆ ಸಲಹೆ ನೀಡಿದರು. ಸೆ. 22ರಿಂದ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿ ಜನ ಗಣತಿ) ಆರಂಭವಾಗಲಿದ್ದು, ಎಲ್ಲರೂ ತಮ್ಮ ಉಪ ಜಾತಿ, ಉಪ ಪಂಗಡದ ಹೆಸರು ಬರೆಸದೆ ‘ಒಕ್ಕಲಿಗ’ ಎಂದೇ ಬರೆಸಬೇಕು ಎಂದು ಸಭೆಯಲ್ಲಿ ಇದ್ದವರು ಸಲಹೆ ನೀಡಿದರು. ಇದಕ್ಕೆ ಸಹಮತ ವ್ಯಕ್ತವಾಯಿತು.

ಒಕ್ಕಲಿಗರು ಒಗ್ಗೂಡಬೇಕಿದೆ. ಒಟ್ಟಾಗಿ ಹೋಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಕ್ಷೀಣಿಸಲಿದೆ. ನಮ್ಮಲ್ಲಿರುವ ಉಪ ಜಾತಿಗಳನ್ನು ಇಟ್ಟುಕೊಂಡೇ ‘ಒಕ್ಕಲಿಗ’ ವಿಚಾರದಲ್ಲಿ ಒಟ್ಟಾಗಬೇಕು. ಈಗಾಗಲೇ ಸಮುದಾಯದವರು ಸಂಘಟಿತರಾಗದೆ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಒಂದಾದರೆ ಮಾತ್ರ ನಮ್ಮ ಶಕ್ತಿ ಉಳಿಯಲು ಸಾಧ್ಯ. ಒಕ್ಕಲಿಗರೆಲ್ಲ ಒಂದೇ ಎಂಬ ಭಾವನೆ ಮೂಡಬೇಕಿದೆ. ಹಿಂದಿನಂತೆ ನಮ್ಮ ಶಕ್ತಿ ತೋರಿಸಲು ಒಟ್ಟಾಗಬೇಕು ಎಂದು ಹಲವರು ಸಲಹೆ ಮಾಡಿದರು.

ಪ್ರಸನ್ನನಾಂದನಾಥ ಸ್ವಾಮೀಜಿ, ‘ಉಪಜಾತಿ, ಪಂಗಡಗಳಿಂದ ಒಕ್ಕಲಿಗ ಸಮಾಜದ ಶಕ್ತಿ ಕ್ಷೀಣಿಸುತ್ತದೆ. ಸರ್ಕಾರದಿಂದ ಸೌಲಭ್ಯಗಳನ್ನು ನ್ಯಾಯಬದ್ಧವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಒಕ್ಕಲಿಗ ಸಮಾಜಕ್ಕೆ ಇರುವ ಮೀಸಲಾತಿಯ ಉಪಯೋಗವನ್ನು ದೊರಕಿಸಬೇಕು. ಸಮಾಜ ಒಡೆಯುವ ಶಕ್ತಿಗಳಿಗೆ ಅವಕಾಶ ನೀಡದಂತೆ ಸಂಘಟಿತರಾಗಿ ಮುನ್ನಡೆಯಬೇಕು’ ಎಂದು ಹೇಳಿದರು.

ನಿಶ್ಚಲಾನಂದನಾಥ ಸ್ವಾಮೀಜಿ, ‘ಜಾತಿ ಜನ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಿ ಒಕ್ಕಲಿಗರ ನಿಖರವಾದ ಸಂಖ್ಯೆ ದಾಖಲು ಮಾಡಬೇಕು’ ಎಂದು ಸಲಹೆ ಮಾಡಿದರು.

ಶಾಸಕ ಎಚ್.ಡಿ.ರಂಗನಾಥ್, ‘ಮುಂದಿನ ಶನಿವಾರ ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಮುಖಂಡರು ಸಭೆ ಸೇರಲಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಒಕ್ಕಲಿಗರ ಸಮಾಜ ಕಟ್ಟೋಣ. ಉಪ ಪಂಗಡಗಳ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ನಿಂಗಪ್ಪ, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕರಾದ ಎಚ್.ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ, ರಾಜ್ಯ ಕುಂಚಿಟಿಗರ ಸಂಘದ ಉಪಾಧ್ಯಕ್ಷ ಎಲ್.ಲಿಂಗಣ್ಣ, ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜು, ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಮುಖಂಡರಾದ ದೊಡ್ಡಲಿಂಗಪ್ಪ, ಆರ್.ಕಾಮರಾಜ್, ನರಸಿಂಹರಾಜು, ಭೈರವ ಗಿರೀಶ್, ಮಂಜುನಾಥ್, ಶಿರಾ ರಮೇಶ್, ವೀರನಾಗಪ್ಪ, ಭಕ್ತರಹಳ್ಳಿ ದೇವರಾಜು, ವೀರಕ್ಯಾತರಾಯ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು
‘ಒಕ್ಕಲಿಗರ ಒಗ್ಗಟ್ಟು ಸಾಬೀತಾಗಬೇಕು’
ರಾಜ್ಯದಲ್ಲಿರುವ ಒಕ್ಕಲಿಗರ ಸಂಘಟನಾ ಶಕ್ತಿ ಒಗ್ಗಟ್ಟನ್ನು ಜಾತಿ ಜನಗಣತಿಯಲ್ಲಿ ಸಾಬೀತು ಮಾಡಬೇಕು. ಉಪ ಪಂಗಡಗಳ ಮೂಲಕ ಒಕ್ಕಲಿಗ ಸಮಾಜ ವಿಘಟನೆ ಆಗಬಾರದು. ಸಂಘಟಿತರಾದರೆ ಸಾಮಾಜಿಕಶೈಕ್ಷಣಿಕ ರಾಜಕೀಯ ಶಕ್ತಿ ಮೂಡುತ್ತದೆ. ಎಲ್ಲ ಉಪ ಪಂಗಡಗಳೂ ಒಕ್ಕಲಿಗರಾಗಿ ಒಟ್ಟಾಗಿ ಸಾಗೋಣ ಎಂದು ನಂಜಾವಧೂತ ಸ್ವಾಮೀಜಿ ಸಲಹೆ ಮಾಡಿದರು. ಒಕ್ಕಲಿಗರ ಸಂಘದ ವಿದ್ಯಾರ್ಥಿ ನಿಲಯಗಳಲ್ಲಿ ಉಪ ಪಂಗಡಗಳ ವ್ಯತ್ಯಾಸವಿಲ್ಲದೆ ಒಕ್ಕಲಿಗ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸಂಘಟಿತರಾಗಿ ನಮ್ಮ ಸಮಾಜದಲ್ಲಿ ಹಿಂದುಳಿದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ದೊರೆಯುವಂತೆ ನೋಡಿಕೊಳ್ಳೋಣ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.