ADVERTISEMENT

ತುಮಕೂರು ವಿಶ್ವವಿದ್ಯಾನಿಲಯ: ಕ್ಯಾಂಪಸ್ ಸಂದರ್ಶನದಲ್ಲಿ 11 ವಿದ್ಯಾರ್ಥಿ ಆಯ್ಕೆ

ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:24 IST
Last Updated 13 ಮೇ 2019, 13:24 IST
ಪ್ರೊ.ವೈ.ಎಸ್.ಸಿದ್ದೇಗೌಡ
ಪ್ರೊ.ವೈ.ಎಸ್.ಸಿದ್ದೇಗೌಡ   

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಇಬ್ಬರು ಹಾಗೂ ಸಮಾಜಕಾರ್ಯದ 9 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ‘ಸಮಸ್ತ ಮೈಕ್ರೋಫಿನಾನ್ಸ್ ಸಂಸ್ಥೆ’ಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಸ್ನಾತಕೊತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ವೇಳೆ ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಪದವಿ ಅವಧಿ ಮುಗಿಯುವ ಮುನ್ನವೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿದ ಅವರು, ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯು ವಾರ್ಷಿಕ ₹ 2.43 ಲಕ್ಷ ವೇತನ ನೀಡಲಿದೆ ಎಂದು ತಿಳಿಸಿದರು.

ADVERTISEMENT

ಅಧ್ಯಾಪಕರ ಕಾರ್ಯ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕೇವಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸೀಮಿತವಾಗಿರದೆ ಸಮಾಜಕ್ಕೆ ಬೌದ್ಧಿಕ ಸಂಪನ್ಮೂಲವಾಗಿ ವಿದ್ಯಾರ್ಥಿಗಳನ್ನು ನೀಡುವ ಜವಾಬ್ದಾರಿ ಇರುತ್ತದೆ ಎಂದರು.

ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯದೊಂದಿಗೆ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ನಿರಂತರ ಕಲಿಕೆ ಪ್ರಕ್ರಿಯೆಯಲ್ಲಿ ಗುಣಾತ್ಮಕ ಶಿಕ್ಷಣ ಪಡೆದು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾಜಕಾರ್ಯದ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನಲ್ಲಿ ಶೇ 100ರಷ್ಟು ಉದ್ಯೋಗಗಳು ಲಭ್ಯವಾಗಿವೆ. ಮುಂದೆ ಮಣಿಪಾಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್, ಎಚ್.ಆರ್.ಪ್ರೀಸಂ, ಕರಣ್ ಎಚ್.ಆರ್ ಸೆಲ್ಯೂಷನ್, ಬೆಂಗಳೂರಿನ ವಿ.ಎಂ.ಗ್ರೂಪ್, ಬಳ್ಳಾರಿಯ ರೀಡ್ ಸಂಸ್ಥೆಗಳು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲು ಮುಂದೆ ಬಂದಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.