ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡುವುದಕ್ಕಿಂತ ರೈತರಿಗೆ ಬೆಳೆ ಬೆಳೆಯಲು ನೀರು ಕೊಡುವುದು ಮುಖ್ಯ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ರಾಗಿ ಬೆಳೆಯಲು ಶುಕ್ರವಾರ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಮಾರ್ಕೋನಹಳ್ಳಿ ಜಲಾಶಯ ತುಂಬಿ ಕೋಡಿಯಾಗಲು ಅರ್ಧ ಅಡಿ ನೀರು ಬರಬೇಕಿದೆ. ಆದರೆ, ಕಳೆದ ತಿಂಗಳು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯಗಳಿಗೆ ಬದ್ಧರಾಗಿ ನೀರು ಹರಿಸುತ್ತಿರುವುದಾಗಿ ತಿಳಿಸಿದರು.
ಹೇಮಾವತಿ ನಾಲಾ ವಲಯದ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಒಳಹರಿವು ಹೆಚ್ಚಿಸಿಕೊಂಡು ಕೆರೆ ಕೋಡಿಯಾದ ನಂತರ ಬಾಗಿನ ಸಮರ್ಪಣೆ ಕಾರ್ಯ ಶೀಘ್ರದಲ್ಲಿ ಮಾಡಲಾಗುವುದು ಎಂದರು.
ನೀರು ಬಿಟ್ಟಿರುವುದರಿಂದ ಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯ 14 ಸಾಲು ಕೆರೆಗಳು ತುಂಬಲಿದೆ. ರಾಗಿ ಬೆಳೆಗೆ 6 ಹಂತದಲ್ಲಿ ನೀರು ಹರಿಸಲಾಗುವುದು. ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಲಹೆ ನೀಡಿದರು.
ಮಂಗಳಾ ಜಲಾಶಯದಿಂದಲೂ ಕೆರೆಗಳಿಗೂ ನೀರು ಇದೇ ಸಂದರ್ಭದಲ್ಲಿ ಶಾಸಕ ಡಾ.ರಂಗನಾಥ್, ಚಾಲನೆ ನೀಡಿದರು.
ಹೇಮಾವತಿ ನಾಲಾ ವಲಯದ ಇ.ಇ ಶ್ರೀನಿವಾಸ್, ಎಇಇ ರುದ್ರೇಶ್, ರೈತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.