ADVERTISEMENT

ಗ್ರಾಮಾಂತರದಲ್ಲಿ ‘ಬಹುಗ್ರಾಮ’ ನಿಷ್ಪ್ರಯೋಜಕ

ಸುರೇಶ್‌ಗೌಡ ವಿರುದ್ಧ ಸಚಿವ ಮಾಧುಸ್ವಾಮಿ ಪರೋಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 6:40 IST
Last Updated 18 ಅಕ್ಟೋಬರ್ 2021, 6:40 IST
.
.   

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ಹೆಬ್ಬೂರು–ಗೂಳೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನಿಷ್ಪ್ರಯೋಜಕವಾಗಿವೆ. ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡದೆ ಕೆರೆಗಳಲ್ಲಿ ನೀರು ನಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ
ವ್ಯಕ್ತಪಡಿಸಿದರು.

ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಸಮರ್ಪಕವಾಗಿ ಹೇಮಾವತಿ ನೀರು ಹರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸುರೇಶ್‌ಗೌಡ ಆರೋಪಿದ ಬೆನ್ನಲ್ಲೇ ಸಚಿವರು ಈ ರೀತಿ ಹೇಳಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಡಿಯುವ ನೀರಿನ ಉದ್ದೇಶಕ್ಕಾಗಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಜನಸಂಖ್ಯೆ ಆಧಾರದಲ್ಲಿ ಪ್ರತಿ ವ್ಯಕ್ತಿಗೆ ಇಂತಿಷ್ಟು ನೀರು ಎಂದು ಹಂಚಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಕೆರೆಗಳಲ್ಲಿ ನೀರು ನಿಲ್ಲದೆ 30 ಎಚ್‌ಪಿ, 20 ಎಚ್‌ಪಿ ಮೋಟಾರ್‌ಗಳಲ್ಲಿ ನೀರನ್ನು ಪಂಪ್ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

ಬೆಳ್ಳಾವಿ ಭಾಗದಲ್ಲಿ ಐದಾರು ಕೆರೆಗಳಿಗೆ ಕೇವಲ ಏಳೆಂಟು ಎಂಸಿಎಫ್‌ಟಿ ನೀರು ನಿಗದಿ ಮಾಡಲಾಗಿದೆ. ಗುಂಡಿ ಬಿದ್ದಿರುವ ಕೆರೆಗಳೇ ಅಷ್ಟು ನೀರನ್ನು ಕುಡಿಯುತ್ತಿದ್ದು, ನೀರಿಲ್ಲದ ಕೆರೆಗಳಿಗೆ ಯೋಜನೆ ಮಾಡಿದರೆ ಏನು ಪ್ರಯೋಜನ ಎಂದು ಪರೋಕ್ಷವಾಗಿ ಸುರೇಶ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿದಿಲ್ಲ ಎಂದು ಸುರೇಶ್‌ಗೌಡ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಅವರು ನಮ್ಮ ಪಕ್ಷದ ನಾಯಕರು. ಒಂದು ವೇಳೆ ನೀರು ಬಿಟ್ಟಿಲ್ಲವೆಂದರೆ ಗಮನಕ್ಕೆ ತರಬೇಕಿತ್ತು. ನನ್ನ ಗಮನಕ್ಕೆ ತಂದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ನೀರು ಹರಿಸಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ತೊರೆದಿರುವುದಕ್ಕೂ ನೀರಾವರಿ ವಿಚಾರಕ್ಕೂ ಸಂಬಂಧವಿಲ್ಲ’ ಎಂದರು.

‘ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರಿಗೆ ಈಗ ನೀಡಿರುವ ನಿಗಮದ ಅಧ್ಯಕ್ಷ ಸ್ಥಾನದ ಬಗ್ಗೆ ಅತೃಪ್ತಿ ಇರುವ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಉಪ ಚುನಾವಣೆ ಬಳಿಕ ಉನ್ನತ ಸ್ಥಾನದ ಭರವಸೆ ಸಿಕ್ಕಿದೆ. ಉಪ ಚುನಾವಣೆ ಕಾರಣಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ವಿಳಂಬವಾಗಿದೆಯೇ ಹೊರತು ಯಾವುದೇ ಬಣಗಳು ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.