ತುಮಕೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಕೆರೆಯಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತಿದ್ದು, ಫೆಬ್ರುವರಿಯಲ್ಲಿ ಗೊರೂರು ಜಲಾಶಯದಿಂದ ಬಿಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದ್ದರೆ, ಅಧಿಕಾರಿಗಳು ಏಪ್ರಿಲ್‌ನಲ್ಲಿ ನೀರು ಹರಿಸಲಾಗುವುದು ಎಂದು ಹೇಳುತ್ತಿದ್ದಾರೆ.
ಬುಗುಡನಹಳ್ಳಿ ಜಲ ಜಲಸಂಗ್ರಹಾಗಾರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್.ಮುರಳೀಧರ್, ‘ಏಪ್ರಿಲ್ ಮೊದಲ ವಾರದಲ್ಲಿ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಮಿತವಾಗಿ ನೀರು ಬಳಸುವಂತೆ ನಗರದ ನಾಗರಿಕರಲ್ಲಿ ಮನವಿ ಮಾಡಬೇಕು. ಇದರಿಂದ ಬೇಸಿಗೆಯಲ್ಲಿ ತಲೆದೋರಬಹುದಾದ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಸಚಿವ ಪರಮೇಶ್ವರ ಅವರಿಗೆ ನೀಡಬೇಕು ಎಂದು ಶುಭ ಕಲ್ಯಾಣ್ ಅವರು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರಿಗೆ ನಿರ್ದೇಶಿಸಿದರು.
ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಬಿ.ಜಿ.ವಿನಯ್ ಕುಮಾರ್, ‘ಬುಗುಡನಹಳ್ಳಿ ಕೆರೆಯ ಒಟ್ಟು ಸಂಗ್ರಹ ಸಾಮರ್ಥ್ಯ 363 ಎಂಸಿಎಫ್‌ಟಿ. ಪ್ರಸ್ತುತ 155 ಎಂಸಿಎಫ್‌ಟಿ ಲಭ್ಯವಿದ್ದು, ಏಪ್ರಿಲ್ ವರೆಗೂ ಸರಬರಾಜು ಮಾಡಬಹುದಾಗಿದೆ. ಡೆಡ್ ಸ್ಟೋರೇಜ್ ಪ್ರಮಾಣ 19 ಎಂಸಿಎಫ್‌ಟಿ. ಇದನ್ನು ಕಳೆದರೆ 135 ಎಂಸಿಎಫ್‌ಟಿ ಬಳಕೆಗೆ ಲಭ್ಯವಾಗಲಿದೆ. ಪ್ರತಿ ದಿನ ನಗರಕ್ಕೆ 1.50 ಎಂಸಿಎಫ್‌ಟಿ ನೀರು ಪೂರೈಕೆ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ಬರುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.