ADVERTISEMENT

ನೀರು: ಉಸ್ತುವಾರಿ ಸಚಿವರ ಯೂಟರ್ನ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 1:58 IST
Last Updated 12 ಅಕ್ಟೋಬರ್ 2021, 1:58 IST

ಶಿರಾ: ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ನೀರು ಹರಿಸುವುದಿಲ್ಲ. ಒಂದು ವೇಳೆ ನೀರು ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಮವಾರ ಯೂಟರ್ನ್ ತೆಗೆದುಕೊಳ್ಳುವ ಮೂಲಕ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರದೇ ಪಕ್ಷದ ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ಚಿದಾನಂದ ಎಂ.ಗೌಡ ಅವರು ಮದಲೂರು ಕೆರೆಗೆ ನೀರು ಬರುವುದು ಖಚಿತ, ಒಂದು ವೇಳೆ ಜೈಲಿಗೆ ಹೋಗುವ ಸ್ಥಿತಿ ಬಂದರೆ ಮೊದಲು ನಾವೇ ಹೋಗುತ್ತೇವೆ ಎಂದು ಹೇಳಿಕೊಳ್ಳುವ ಮೂಲಕ ಪಕ್ಷಕ್ಕೆ ಆಗುತ್ತಿದ್ದ ಮುಜುಗರವನ್ನು ತಪ್ಪಿಸುವ ಪ್ರಯತ್ನ ನಡೆಸಿದ್ದರು.

ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಯನ್ನು ವಿರೋಧಿಸಿ ಮದಲೂರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ, ಮದಲೂರು ಕೆರೆಯಿಂದ ಶಿರಾ ನಗರದವರೆಗೆ ಆಗಸ್ಟ್ 16ರಂದು ಜೆಡಿಎಸ್ ಪಾದಯಾತ್ರೆ ನಡೆಸಿತ್ತು.

ADVERTISEMENT

ಕಾಂಗ್ರೆಸ್ ಸಹ ಮದಲೂರು ಕೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಗೆ ದಿನ ನಿಗದಿಪಡಿಸಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಪಾದಯಾತ್ರೆ ಮುಂದೂಡಿತ್ತು. ರೈತ ಸಂಘವು ಉಸ್ತುವಾರಿ ಸಚಿವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಶಿರಾ ವಿಧಾನಸಭೆಯ ಉಪಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 6 ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ಬಾಗಿನ ಅರ್ಪಿಸಲು ಬರುವುದಾಗಿ ಆಶ್ವಾಸನೆ ನೀಡಿದ್ದರು. ಚುನಾವಣೆಯಲ್ಲಿ ಜನತೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಗೆಲ್ಲಿಸಿದ್ದರು.

ಮದಲೂರು ಕೆರೆಗೆ ನೀರು ನಿಗದಿಯಾಗಿಲ್ಲ ಎಂದು ಮಾಧುಸ್ವಾಮಿ ಹೇಳಿದರೆ, ನೀರು ನಿಗದಿಯಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳುವ ಮೂಲಕ ತಿರುಗೇಟು ನೀಡಿದ್ದರು.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮದಲೂರು ಕೆರೆಗೆ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.