ADVERTISEMENT

ನವೆಂಬರ್ ಅಂತ್ಯಕ್ಕೆ ಹಾಗಲವಾಡಿ ಕೆರೆಗೆ ನೀರು

ಕಾವೇರಿ ನಿಗಮದ ಎಂ.ಡಿ. ಜಯಪ್ರಕಾಶ್ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:29 IST
Last Updated 23 ಸೆಪ್ಟೆಂಬರ್ 2021, 3:29 IST
ಹಾಗಲವಾಡಿ ಕೆರೆಗೆ ನೀರು ಹರಿಸುವ ಕಾಲುವೆ ವೀಕ್ಷಿಸಿದ ಕಾವೇರಿ ನಿಗಮ ಮಂಡಳಿಯ ಎಂ.ಡಿ. ಜಯಪ್ರಕಾಶ್
ಹಾಗಲವಾಡಿ ಕೆರೆಗೆ ನೀರು ಹರಿಸುವ ಕಾಲುವೆ ವೀಕ್ಷಿಸಿದ ಕಾವೇರಿ ನಿಗಮ ಮಂಡಳಿಯ ಎಂ.ಡಿ. ಜಯಪ್ರಕಾಶ್   

ಹಾಗಲವಾಡಿ: ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಕಾಲುವೆ ಕಾಮಗಾರಿ ನವೆಂಬರ್ ಅಂತ್ಯದ ವೇಳೆಗೆ ಮುಗಿಯಲಿದ್ದು, ನೀರು ಹರಿಯಲಿದೆ ಎಂದು ಕಾವೇರಿ ನಿಗಮದ ಎಂ.ಡಿ. ಜಯಪ್ರಕಾಶ್ ಹೇಳಿದರು.

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದಿಂದ ಹಾಗಲವಾಡಿವರೆಗೆ ಹೇಮಾವತಿ ನಾಲೆ ಹಾಗೂ ಹರದಗೆರೆ ಕೆರೆ ವೀಕ್ಷಿಸಿ ಮಾತನಾಡಿದರು.

ಇಲ್ಲಿನ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಹಾಗಲವಾಡಿ ಕೆರೆಗೆ ನೀರು ಹರಿಸುವ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ. ಹಾಗಲವಾಡಿ ಕೆರೆಗೆ ನೀರು ಹರಿಸುವ ಮಾರ್ಗಮಧ್ಯದಲ್ಲಿ ಕೆಲವು ರೈತರಿಗೆ ಪರಿಹಾರ ನೀಡಿಲ್ಲ ಎನ್ನುವ ವಿಚಾರ ತಿಳಿದಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಶೀಘ್ರ ಅವರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ರೈತರಿಗೆ ಅಂತಿಮವಾಗಿ ಪರಿಹಾರದ ಅವಾರ್ಡ್ ನೋಟಿಸ್ ನೀಡಿ ಅವರಿಂದ ಜಾಗ ಬಿಡಿಸಿಕೊಂಡು ಹಾಗಲವಾಡಿ ಕೆರೆಗೆ ನೀರು ಹರಿಸಲಾಗುವುದು ಎಂದರು.

ADVERTISEMENT

ಹಾಗಲವಾಡಿ ಕೆರೆಗೆ ನೀರು ಹರಿಸುವಂತಹ ನಾಲೆಗಳಲ್ಲಿ ನೀರು ಸೋರಿಕೆಯಾಗಿ ತೋಟ, ಹೊಲಗಳನ್ನು ಸೇರುತ್ತಿದೆ. ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೇಮಾವತಿ ನಾಲೆ ಕಾಮಗಾರಿ ಸಂದರ್ಭದಲ್ಲಿ ಬ್ಲಾಸ್ಟಿಂಗ್ ಮಾಡಿದಾಗ ಕೆಲವು ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಲವೆಡೆ ಆಳವಾಗಿ ನಾಲೆ ತೋಡಿರುವುದರಿಂದ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಆ ಭಾಗದಲ್ಲಿ ಪೈಪ್‌ಲೈನ್ ಮೂಲಕವೇ ನೀರು ಹರಿಸುವ ಯೋಜನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಬಿಜೆಪಿ ಮುಖಂಡ ಎಸ್‌.ಡಿ. ದಿಲೀಪ್ ಕುಮಾರ್ ಮಾತನಾಡಿ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಪರಿಶ್ರಮದಿಂದಾಗಿ ಹಾಗಲವಾಡಿ ಕೆರೆಗೆ ನೀರನ್ನು ಹರಿಸಲು ಸಿದ್ಧತೆಗಳು ನಡೆದಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯಾಗಿದ್ದು, ಈಗ ಸಚಿವರೆ ನಿಗಮದ ಎಂ.ಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಇಲ್ಲಿನ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದಾರೆ. ಬೋಗಸಂದ್ರದ ಗ್ರಾಮದಿಂದ ಹಾಗಲವಾಡಿ ಕೆರೆಯವರೆಗೆ ನಾಲೆಗಳಿಗೆ ಗುಣಮಟ್ಟದ ಸಿಮೆಂಟ್ ಲೈನಿಂಗ್ ಮಾಡಿದಾಗ ನೀರು ಪೋಲಾಗುವುದು ತಡೆಯಬಹುದು ಎಂದರು.

ಬಿಜೆಪಿ ಮುಖಂಡ ಎಸ್‌.ಡಿ. ದಿಲೀಪ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಮೆಡಿಕಲ್ ಬಾಬು, ವಿಶ್ವನಾಥ್, ಪ್ರಕಾಶ್, ದಯಾನಂದ, ವಿನಯ್‌ ಕುಮಾರ್, ಉದಯ, ಕೃಷ್ಣಾಜಟ್ಟಿ ಅಧಿಕಾರಿಗಳಾದ ಇ.ಇ ಮೋಹನ್, ಸಿ. ಮಹೇಶ್, ವಿಶೇಷ ಭೂಸ್ವಾಧೀನ ಅಧಿಕಾರಿ ಯಶೋದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.