ತುಮಕೂರು: ಅಂಗವಿಕಲರಲ್ಲಿ ಸಾಮಾನ್ಯರಿಗಿಂತ ಹೆಚ್ಚು ಪ್ರತಿಭೆ, ಆತ್ಮಸ್ಥೈರ್ಯ, ಸಂಕಲ್ಪ ಇದೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಲು ಸವಲತ್ತು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಆಡಳಿತ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಶೇ 5ರಷ್ಟು ಜನ ಅಂಗವಿಕಲರು ಇದ್ದಾರೆ. ಸುಮಾರು 6.50 ಕೋಟಿ ಜನ ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಹುಟ್ಟಿನಿಂದಲೇ ಅಂಗವೈಕಲ್ಯತೆ ಕಾಣಿಸಿಕೊಳ್ಳುತ್ತದೆ. ಸಮಾಜ ಅವರಿಗೆ ಶಕ್ತಿ, ಆತ್ಮಸ್ಥೈರ್ಯ ನೀಡಿದರೆ ಉತ್ತಮ ಜೀವನ ಕಟ್ಟಿಕೊಳ್ಳುತ್ತಾರೆ ಎಂದರು.
ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಬೇಕು ಎಂಬ ಉದ್ದೇಶದಿಂದ 1,500 ಸಲಕರಣೆ ವಿತರಿಸಲಾಗುತ್ತಿದೆ. ಇದಕ್ಕೆ ಸುಮಾರು ₹1 ಕೋಟಿಯಷ್ಟು ಹಣ ವ್ಯಯಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಈ ಕೆಲಸ ಮಾಡುತ್ತಿವೆ. ಅಂಗವಿಕಲರ ಬದುಕು ಹಸನಾಗಿಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಗ್ಯಾರಂಟಿಯಲ್ಲೂ ಫಲ ಸಿಗುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಅಂಗವಿಕಲರನ್ನು ಅಸಡ್ಡೆ ಭಾವನೆಯಿಂದ ನೋಡುವುದು ಕಡಿಮೆಯಾಗಿದೆ. ಅಧಿಕಾರಿಗಳು ಯಾವುದೇ ತಾರತಮ್ಯ ತೋರದೆ ಎಲ್ಲರಿಗೂ ಸರ್ಕಾರದ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಎಚ್ಎಎಲ್ ಜನರಲ್ ಮ್ಯಾನೇಜರ್ ಕೃಷ್ಣಪ್ಪ, ಅಲಿಂಕೊ ಸಂಸ್ಥೆಯ ಶಿವಕುಮಾರ್ ಇತರರು ಹಾಜರಿದ್ದರು.
ಪುನಶ್ಚೇತನ ಕೇಂದ್ರಕ್ಕೆ ₹10 ಕೋಟಿ
ಅಂಗವಿಕಲರ ಪುನಶ್ಚೇತನ ಕೇಂದ್ರ ನಿರ್ಮಿಸಲು ₹10 ಕೋಟಿ ಅನುದಾನ ಲಭ್ಯವಿದೆ. ಕೇಂದ್ರ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿ.ಪಂ ಸಿಇಒ ಜಿ.ಪ್ರಭು ಹೇಳಿದರು. ಎಲ್ಲ ಇಲಾಖೆಗಳಲ್ಲಿ ಶೇ 3ರಷ್ಟು ಅನುದಾನ ಅಂಗವಿಕಲರಿಗೆ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಯುಡಿಐಡಿ ಕಾರ್ಡ್ ವಿತರಣೆ ಕಾರ್ಯ ಶೇ 99 ರಷ್ಟು ಪೂರ್ಣಗೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.