ADVERTISEMENT

ತುಮಕೂರು: ‘ಭದ್ರಾ’ ಕೆರೆ ತುಂಬಿಸುವುದು ಯಾವಾಗ?

ಕೆ.ಜೆ.ಮರಿಯಪ್ಪ
Published 12 ಜುಲೈ 2021, 3:54 IST
Last Updated 12 ಜುಲೈ 2021, 3:54 IST
ನಾಲೆ (ಸಾಂದರ್ಭಿಕ ಚಿತ್ರ)
ನಾಲೆ (ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಸುವ ಸಲುವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿ ಏಳು ವರ್ಷ ಕಳೆದಿದ್ದರೂ ಕಾಮಗಾರಿ ಇನ್ನೂ ತೆವಳುತ್ತಲೇ ಸಾಗಿದೆ.

ಯೋಜನೆಯ ಒಟ್ಟು ಕಾಮಗಾರಿಯಲ್ಲಿ ಕಾಲು ಭಾಗದಷ್ಟು ಕೆಲಸವೂ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಹಣವೂ ಬಿಡುಗಡೆಯಾಗಿಲ್ಲ. ಆದರೆ ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಂಡು ನೀರು ಹರಿದು ಬರಲಿದೆ ಎಂದು ಬಿಂಬಿಸಲಾಗುತ್ತಿದೆ. ಇದೇ ವೇಗದಲ್ಲಿ ಪ್ರಗತಿ ಸಾಧಿಸಿದರೆ ದಶಕ ಕಳೆದರೂ ನೀರು ಬರುವುದು ಅನುಮಾನ ಎಂಬ ಆತಂಕ ವ್ಯಕ್ತವಾಗಿದೆ.

ಯೋಜನೆ ಉದ್ದೇಶ: ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವ, ಯಾವುದೇ ನೀರಾವರಿ ಯೋಜನೆಗಳಿಲ್ಲದ ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ತರಲು ಉದ್ದೇಶಿಸಲಾಗಿದೆ. ಶಿರಾ ತಾಲ್ಲೂಕಿನ 41, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 21 ಕೆರೆಗಳಿಗೆ ಕೆರೆಯ ಸಾಮರ್ಥ್ಯದ ಅರ್ಧದಷ್ಟು ನೀರು ತುಂಬಿಸಲು ಯೋಜಿಸಲಾಗಿದೆ. ಅದಕ್ಕಾಗಿ ಶಿರಾಗೆ 2.13 ಟಿಎಂಸಿ, ಚಿಕ್ಕನಾಯಕನಹಳ್ಳಿಗೆ 1.1 ಟಿಎಂಸಿ, ಪಾವಗಡಕ್ಕೆ 0.54 ಟಿಎಂಸಿ ನೀರು ಕೊಡಲಾಗುತ್ತದೆ.

ADVERTISEMENT

ಯೋಜನೆ ವೆಚ್ಚ: ಒಟ್ಟು ಯೋಜನಾ ವೆಚ್ಚ ₹12,340 ಕೋಟಿ. 2015ರಲ್ಲಿ ಯೋಜನೆ ರೂಪಿಸಿದಾಗ ₹12 ಸಾವಿರ ಕೋಟಿಗೆಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಒಪ್ಪಿಗೆ ಕೊಟ್ಟು 7 ವರ್ಷ ಕಳೆದಿದ್ದು, ಯುದ್ಧೋಪಾದಿಯಲ್ಲಿ ಕೆಲಸ ನಡೆದರೂ ಕನಿಷ್ಠ ಐದಾರು ವರ್ಷಗಳು ಬೇಕಾಗುತ್ತದೆ. ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಈ ಮೊತ್ತ ₹20 ಸಾವಿರ ಕೋಟಿ ದಾಟಬಹುದು. ಕೆಲಸ ನಿಧಾನವಾದರೆ ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಾಗಬಹುದು. ಇಷ್ಟು ಸುದೀರ್ಘ ಸಮಯ ತೆಗೆದುಕೊಂಡರೆ ನೀರು ಹರಿದು ಬರುವ ವೇಳೆಗೆ ಯೋಜನೆಯೇ ಅಪ್ರಸ್ತುತವಾಗಬಹುದು ಎಂಬ ಆತಂಕ ಕಾಡುತ್ತಿದೆ.

ನಾಲೆ ನಿರ್ಮಾಣ: ತರೀಕೆರೆ ತಾಲ್ಲೂಕಿನ ಮೂಲಕ ಹಾದು ಬರುವ ನಾಲೆ ಅಜ್ಜಂಪುರ ಬಳಿ ತಿರುವು ಪಡೆದುಕೊಳ್ಳುತ್ತದೆ. ಒಂದು ನಾಲೆ ಚಿತ್ರದುರ್ಗ ಭಾಗಕ್ಕೆ, ಮತ್ತೊಂದು ನಾಲೆ ಜಿಲ್ಲೆ ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಸುಮಾರು 160 ಕಿ.ಮೀ ನಾಲೆ ಹಾದು ಹೋಗಲಿದೆ. ಇದಕ್ಕಾಗಿ 3 ಸಾವಿರ ಎಕರೆಗೂ ಹೆಚ್ಚು ಜಮೀನು ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಸರ್ಕಾರಿ ಭೂಮಿ ಇರುವ ಕಡೆಗಳಲ್ಲಿ ಮಾತ್ರ ಕಾಮಗಾರಿ ನಡೆದಿದೆ. ಭೂಸ್ವಾಧೀನ ಪಡಿಸಿಕೊಳ್ಳಲು ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿ, ರೈತರಿಗೆ ಪರಿಹಾರ ಕೊಟ್ಟು ಕೆಲಸ ಆರಂಭಿಸುವುದು ಯಾವಾಗ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗದಾಗಿದೆ.

ಅರಣ್ಯ ಪ್ರದೇಶದಲ್ಲಿ 77 ಕಿ.ಮೀ ನಾಲೆ ಹಾದು ಬರಲಿದ್ದು, ಇಲ್ಲಿ ಕೆಲಸ ಆರಂಭಿಸುವ ಮುನ್ನ ಅರಣ್ಯ, ಪರಿಸರ, ಮತ್ತಿತರ ಇಲಾಖೆಗಳ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದು ಪ್ರಾಥಮಿಕ ಹಂತದಲ್ಲಿ ಆಗಬೇಕಿರುವ ಕೆಲಸ. ಆದರೆ ಇಂತಹ ಆರಂಭಿಕ ಕೆಲಸಕ್ಕೂ ಚಾಲನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹಣ ಬಿಡುಗಡೆ: ತುಮಕೂರು ಭಾಗದಲ್ಲಿ ನಾಲೆ ನಿರ್ಮಾಣಕ್ಕೆ ಸುಮಾರು ₹2 ಸಾವಿರ ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದ್ದು, ₹120 ಕೋಟಿ ಬಿಡುಗಡೆಯಾಗಿದೆ. ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ತೆವಳುತ್ತಾ ಸಾಗಿದೆ.

ಒಟ್ಟಾರೆ ಕಾಮಗಾರಿಯ ವೇಗ ಗಮನಿಸಿದರೆ ಜಿಲ್ಲೆಗೆ ನೀರು ಹರಿದು ಬರಲು ಇನ್ನೂ ಒಂದು ದಶಕ ಬೇಕಾಗಬಹುದು. ತಕ್ಷಣ ಕಾಮಗಾರಿ ಚುರುಕುಗೊಳಿಸಬೇಕು. ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಸರ್ಕಾರ ಸಹ ಸಕಾಲಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.