ADVERTISEMENT

ಡಬಲ್‌ ಎಂಜಿನ್‌ ಸರ್ಕಾರದಿಂದ ಮಹಿಳಾ ಸಬಲೀಕರಣ:ಶೋಭಾ ಕರಂದ್ಲಾಜೆ

ಬಿಜೆಪಿಯ ಮಹಿಳಾ ಮೋರ್ಚಾದಿಂದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 14:32 IST
Last Updated 18 ಮಾರ್ಚ್ 2023, 14:32 IST
ತುಮಕೂರು ತಾಲ್ಲೂಕಿನ ನಾಗವಲ್ಲಿ ಸಮೀಪ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು. ಮುಖಂಡ ಎಸ್‌.ಸುರೇಶ್‌ಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಇದ್ದರು
ತುಮಕೂರು ತಾಲ್ಲೂಕಿನ ನಾಗವಲ್ಲಿ ಸಮೀಪ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು. ಮುಖಂಡ ಎಸ್‌.ಸುರೇಶ್‌ಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಇದ್ದರು   

ತುಮಕೂರು: ‘ಡಬಲ್‌ ಎಂಜಿನ್‌ ಸರ್ಕಾರ ಮಹಿಳೆಯರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲ್ಲೂಕಿನ ನಾಗವಲ್ಲಿ ಸಮೀಪದ ಬಾಣವಾರ ಗೇಟ್‌ ಬಳಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಧರ್ಮ, ಜಾತಿ ಆಧಾರದಲ್ಲಿ ಯೋಜನೆ ಜಾರಿಗೆ ತಂದಿಲ್ಲ. ಸರ್ವರಿಗೂ ಸಲ್ಲುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಮಧ್ಯವರ್ತಿಗಳು ಇಲ್ಲದೆ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಜಲಜೀವನ್‌ ಮಿಷನ್‌ ಯೋಜನೆಯಡಿ ₹150 ಕೋಟಿ ಅನುದಾನವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ರೈತರು, ಸಾಮಾನ್ಯ ಜನರ ಜೀವನ ಸುಧಾರಣೆಗೆ ಸರ್ಕಾರ ಶ್ರಮಿಸುತ್ತಿದೆ. ಮಹಿಳೆಯರು ಬೂತ್‌ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಬಿ.ಸುರೇಶ್‌ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಮುಖಂಡ ಎಸ್‌.ಪಿ. ಮುದ್ದಹನುಮೇಗೌಡ, ‘ಕಾಂಗ್ರೆಸ್‌ನ ಒಬ್ಬ ನಾಯಕ ರಾಷ್ಟ್ರದ ಆಡಳಿತ ತೆಗೆದುಕೊಳ್ಳಬೇಕು ಎಂದು ಹಪಹಪಿಸುತ್ತಿದ್ದಾರೆ. ಬೇರೆ ರಾಷ್ಟ್ರಕ್ಕೆ ಹೋಗಿ ನಮ್ಮ ದೇಶದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರ ಕೈಗೆ ದೇಶ ಕೊಡಲು ಸಾಧ್ಯವಿಲ್ಲ. ತಮ್ಮನ್ನು ತಾವು ನೋಡಿಕೊಳ್ಳದವರು, ದೇಶದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ? ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹೆಸರೇಳದೆ ಟೀಕಾಪ್ರಹಾರ ನಡೆಸಿದರು.

ಬರೀ ಭಾಷಣದಲ್ಲಿದ್ದ ಪರಿಶಿಷ್ಟರ ಮೀಸಲಾತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿಸಿದ್ದಾರೆ. ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದಾರೆ. ನಾಡಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಅಂಬಿಕಾ, ಪದಾಧಿಕಾರಿಗಳಾದ ಸುಮಿತ್ರಾದೇವಿ, ರೇಣುಕಮ್ಮ, ಶಾರದಾ ನರಸಿಂಹಮೂರ್ತಿ, ತಾರಾದೇವಿ, ಪುಟ್ಟಲಕ್ಷ್ಮಮ್ಮ, ಶಿವಮ್ಮ ನಾಗರಾಜ್‌, ಶಾಂತಮ್ಮ, ಮುಖಂಡ ಗಂಗಹನುಮಯ್ಯ ಮೊದಲಾದವರು ಹಾಜರಿದ್ದರು.

**

‘ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ’

‘ಯಾವುದೇ ಸಂದರ್ಭದಲ್ಲಿ, ಏನಾದರೂ ತಪ್ಪಾಗಿ ನಡೆದುಕೊಂಡಿದ್ದರೆ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ತಾಯಿ. ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ’ ಎಂದು ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ಮನವಿ ಮಾಡಿದರು.

ನಾಗವಲ್ಲಿ ಶಾಲೆ ಅಥವಾ ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕವಾಗಿ ಮಹಿಳಾ ವಿಶ್ವವಿದ್ಯಾಲಯ ಪ್ರಾರಂಭ ಮಾಡುವ ಕನಸಿದೆ. ಪ್ರತಿ ವರ್ಷ 3 ಸಾವಿರ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ಇದರಿಂದ ಸಹಾಯಕವಾಗಲಿದೆ ಎಂದರು.

ಕಳೆದ ಚುನಾವಣೆಯ ಸಮಯದಲ್ಲಿ ಈಗಿನ ಶಾಸಕರು ಸ್ತ್ರೀ ಶಕ್ತಿ ಸಂಘಗಳಿಂದ 16 ಸಾವಿರ ನಕಲಿ ಬಾಂಡ್‌ಗಳನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ವಿತರಣೆ ಮಾಡಿ, ಚುನಾವಣೆ ಅಕ್ರಮ ಎಸಗಿದ್ದಾರೆ. ಅದೇ ರೀತಿ ಈ ಬಾರಿಯೂ ಮಾಡಲು ಮುಂದಾಗಿದ್ದಾರೆ. ಹೆಣ್ಣು ಮಕ್ಕಳು ಎಚ್ಚರದಿಂದ ಇರಬೇಕು. ಅಂತಹವರನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರದಲ್ಲಿ ರಫ್ತು ಘಟಕ ಸ್ಥಾಪಿಸಲು ಉದ್ದೇಶಿಸಿದ್ದೇನೆ. ಈ ಬಾರಿ ಅವಕಾಶ ನೀಡಿದರೆ ಈ ಘಟಕ ಪ್ರಾರಂಭ ಮಾಡಲಾಗುವುದು. ತರಕಾರಿ, ತೆಂಗು, ಅಡಿಕೆ ಸೇರಿದಂತೆ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳನ್ನು ಇಲ್ಲಿಂದ ರಫ್ತು ಮಾಡಲು ಸಾಧ್ಯವಾಗಲಿದೆ. ರೈತರ ಬದುಕು ಸುಧಾರಿಸಬೇಕು ಎಂಬ ಕಾರಣಕ್ಕೆ ರಫ್ತು ಘಟಕ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.