ADVERTISEMENT

ಅವರೆ ಗಿಡಕ್ಕೆ ಕಂಬಳಿ ಹುಳು ಬಾಧೆ

ಹೊಲಗಳಲ್ಲಿ ಅಂತರ್ ಬೆಳೆಯಾಗಿ ಬಿತ್ತನೆ: ರೈತರ ಆತಂಕ

ಪಾಂಡುರಂಗಯ್ಯ ಎ.ಹೊಸಹಳ್ಳಿ
Published 24 ನವೆಂಬರ್ 2020, 3:06 IST
Last Updated 24 ನವೆಂಬರ್ 2020, 3:06 IST
ಕಂಬಳಿ ಹುಳದ ಗೂಡು
ಕಂಬಳಿ ಹುಳದ ಗೂಡು   

ತುರುವೇಕೆರೆ: ಹವಾಮಾನದ ವ್ಯತ್ಯಾಸದಿಂದಾಗಿ ಮುಂಗಾರು ಬೆಳೆ ಅವರೆ ಬೆಳೆಗೆ ಎಲೆ ತಿನ್ನುವ ಕಂಬಳಿ ಹುಳುವಿನ (ಸುಡಾಪ್ಟರ್ ಲಿಟುರಾ) ರೋಗದ ಬಾಧೆ ತಾಲ್ಲೂಕಿನ ವಿವಿಧೆಡೆ ಕಾಣಿಸಿಕೊಂಡಿದೆ.

ತಾಲ್ಲೂಕಿನ ರೈತರು ತೋಟ ಸಾಲು, ಹೊಲದ ಅಕ್ಕಡಿ ಸಾಲು, ಅಡಿಕೆ, ಬಾಳೆ, ಗದ್ದೆ ಹೊಲಗಳಲ್ಲಿ ಅಂತರ್ ಬೆಳೆಯಾಗಿ ಅವರೆ ಬಿತ್ತನೆ ಮಾಡಿದ್ದರು. ಮುಂಗಾರು ಬಿತ್ತನೆಯ ಆರಂಭದಲ್ಲಿ ಉತ್ತಮ ಮಳೆಯಾದ್ದರಿಂದ ಅವರೆ ಗಿಡವು ಸೊಂಪಾಗಿ ಬೆಳೆದು ರೈತರಿಗೆ ಉತ್ತಮ ಫಸಲು ಸಿಗುವ ಭರವಸೆ ಮೂಡಿಸಿತ್ತು.

ಅಕ್ಟೋಬರ್-ನವೆಂಬರ್‍ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದ ಮೇಲೆ ಅವರೆ ಗಿಡವು ಹೂವು ಮತ್ತು ಕಾಯಿಕಟ್ಟುವ ಸಮಯಕ್ಕೆ ಸರಿಯಾಗಿ ಅಲ್ಲೊಂದು ಇಲ್ಲೊಂದು ಗಿಡಕ್ಕೆ ಕಂಬಳಿ ಹುಳುವಿನ ರೋಗ ಕಾಣಿಸಿಕೊಂಡಿತ್ತು. ಮೋಡ ಮುಸುಕಿದ ವಾತಾವರಣ ಹಾಗು ಜಿಟಿಜಿಟಿ ಮಳೆಯಿಂದ ಈ ರೋಗ ಕ್ರಮೇಣ ಎಲ್ಲೆಡೆ ಸಾಂಕ್ರಾಮಿಕ ರೋಗದಂತೆ ಪಸರಿಸಿಕೊಂಡಿದೆ.

ADVERTISEMENT

ರೋಗದ ಲಕ್ಷಣ: ರೋಗ ಹರಡುವ ಸುಡಾಪ್ಟರ್ ಲಿಟುರಾ ಹುಳ ಮೊದಲು ಅವರೆ ಗಿಡದ ಎಲೆಯ ಹಿಂದೆ ಗೂಡುಕಟ್ಟಿ ಲಾರ್ವಾ ಸ್ಥಿತಿಯಲ್ಲಿದ್ದು ಕೆಲವೇ ದಿನಗಳಲ್ಲಿ ನೂರಾರು ಸಣ್ಣಸಣ್ಣ ಹುಳುಗಳಾಗಿ ಹೊರ ಬಂದು ಎಲೆಯ ಪತ್ರಹರಿತ್ತಿನ ಹಸಿರನ್ನು ಕೆರೆದು ತಿನ್ನಲು ಶುರು ಮಾಡುತ್ತದೆ.

ಹೀಗೆ ಒಂದೆರಡು ದಿನಗಳಲ್ಲಿ ಆ ಹುಳಗಳು ಇಡೀ ಗಿಡವನ್ನು ಸಂಪೂರ್ಣವಾಗಿ ಆವರಿಸಿ ಎಲೆಯನ್ನು ತಿಂದು ಬರಿ ಬಿಳಿ ಪೇಪರಿನಂತೆ ಮಾಡುತ್ತವೆ. ಇದೇ ರೀತಿ ಹೊಲದ ಉಳಿದ ಗಿಡ ತಿನ್ನಲು ಪ್ರಾರಂಭಿಸುತ್ತವೆ. ಗಿಡದ ನಾನಾ ಭಾಗಗಳಿಗೆ ಆಹಾರವನ್ನು ಪೂರೈಸುತ್ತಿದ್ದ ಎಲೆಯ ಪತ್ರಹರಿತ್ತು ನಾಶವಾದರೆ ಹೂ ಮತ್ತು ಕಾಯಿಗಳು ಸರಿಯಾಗಿ ಕಟ್ಟಲಾಗದೆ ಗಿಡ ಒಣಗಲು ಶುರುವಾಗಿ ಇಳುವರಿ ಕುಂಠಿತಗೊಳ್ಳುತ್ತದೆ.

ಈ ವೇಳೆ ರೋಗ ನಿಯಂತ್ರಣಕ್ಕೆ ರೈತರು ಔಷಧಿ ಸಿಂಪಡಿಸಲು ಸೊನೆ ಮಳೆ ಮತ್ತು ಮೋಡ ಮುಸುಕಿದ ವಾತಾವರಣ ಹಿನ್ನಡೆಯುಂಟು ಮಾಡಿ ರೋಗ ಮತ್ತಷ್ಟು ಉಲ್ಬಣಗೊಂಡಿದೆ.

ಕೆಲ ತೋಟಗಳಲ್ಲಿ ಹೇಮಾವತಿ ನಾಲಾ ನೀರು ನಿಂತು ಗಿಡವೆಲ್ಲಾ ಹಣ್ಣು ತಿರುಗಿ ಒಣಗಿ ಹೋಗುತ್ತಿದೆ. ದನಕರುಗಳ ಮೇವಿಗೋಸ್ಕರ ಹಾಗು ಈಗ ಹಸಿಕಾಯನ್ನೇ ಕೊಯ್ದು ಮಾರುಕಟ್ಟೆಯಲ್ಲಿ ಮಾರಿ ಹಣ ಗಳಿಸುವ ರೈತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ತಾಲ್ಲೂಕಿನ ಎಲ್ಲೆಡೆ ನಾಟಿ ಮತ್ತು ಹೆಬ್ಬಾಳವರೆಯನ್ನು ಹೆಚ್ಚಿನ ಪ್ರಮಾಣದಲ್ಲಿಬಿತ್ತನೆ ಮಾಡಲಾಗುತ್ತಿದೆ.

ಅಲ್ಲದೆ ಅವರೆ ಗಿಡದ ಕಾಯಿಯನ್ನು ಕಿತ್ತ ಮೇಲೆ ಸೊಪ್ಪು ಉದುರಿ ಹೊಲ, ತೋಟಗಳಿಗೆ ಉತ್ತಮ ಗೊಬ್ಬರವಾಗಲಿದೆ ಎಂಬ ಆಲೋಚನೆಯಿಂದಲೂ ರೈತರು ಅವರೆ ಗಿಡವನ್ನು ಮಳೆಯ ನೀರು ಮತ್ತು ಕೋಳವೆ ಬಾವಿಯ ನೀರಿನಲ್ಲಿ ಬೆಳೆಯುವ ವಾಡಿಕೆ ಇದೆ.

ತಾಲ್ಲೂಕಿನಲ್ಲಿ 2014ರಲ್ಲಿ 1150, 2015-744, 2016-535, 2017-750, 2018-354, 2019-995, 2020-750 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬಿತ್ತನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.