ಕೊರಟಗೆರೆ: ತಾಲ್ಲೂಕಿನ ಹಲವೆಡೆ ಮುಸುಕಿನ ಜೋಳದ ಪೈರಿಗೆ ಲದ್ದಿ ಹುಳದ ಬಾಧೆ ಶುರುವಾಗಿದ್ದು, ಪ್ರಾರಂಭದ ಹಂತದಲ್ಲೇ ಜೋಳದ ಬೆಳೆ ನಾಶವಾಗುತ್ತಿದೆ.
ತಾಲ್ಲೂಕಿನಾದ್ಯಂತ ಮುಸುಕಿನ ಜೋಳ, ಶೇಂಗಾ, ತೊಗರಿ, ರಾಗಿ ಬೆಳೆಗಳನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಕಾರಣ ಬಹುತೇಕ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದಾರೆ. ಹೊಳವನಹಳ್ಳಿ ಹಾಗೂ ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮುಸುಕಿನ ಜೋಳ ಬಿತ್ತನೆಯಾಗಿದೆ. ತಾಲ್ಲೂಕಿನಾದ್ಯಂತ 5,320 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.
ಬಿತ್ತನೆಯಾದ ಬೀಜ ಉತ್ತಮವಾಗಿ ಮೊಳಕೆಯೊಡೆದು 15- 20 ದಿನಕ್ಕೆ ಸುಮಾರು ಒಂದೂವರೆಯಿಂದ ಎರಡು ಅಡಿ ಎತ್ತರಕ್ಕೆ ಬೆಳೆದಿದೆ. ಆದರೆ ಈಗ ಗಿಡದ ಗರಿಗಳನ್ನು ಲದ್ದಿ ಹುಳುಗಳು ತಿನ್ನುತ್ತಿವೆ. ಉತ್ತಮವಾಗಿದ್ದ ಬೆಳೆಗೆ ಆರಂಭದಲ್ಲಿಯೇ ಕೀಟ ಬಾಧೆ ಶುರುವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಎದುರಾಗಿದೆ.
ಬಿತ್ತನೆ ನಂತರ 9ರಿಂದ 15 ದಿನದ ಒಳಗೆ ಲದ್ದಿ ಹುಳುಗಳು ರೂಪಾಂತರಗೊಂಡು ಮೊದಲು ಸಸ್ಯದ ಎಲೆ(ಗರಿ)ಗಳನ್ನು ತಿಂದು ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ನಂತರ ಸಸ್ಯದ ಕಾಂಡಕ್ಕೆ ಲಗ್ಗೆ ಇಟ್ಟು ಒಂದೆರಡು ದಿನಗಳಲ್ಲೆ ಇಡೀ ಸಸ್ಯವನ್ನು ತಿಂದು ಹಾಕುತ್ತವೆ. ಇದು ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಕೀಟ ಆಕ್ರಮಣಗೊಂಡ ಮೂರ್ನಾಲ್ಕು ದಿನದಲ್ಲೇ ಗಿಡವನ್ನು ಸಂಪೂರ್ಣ ನಾಶ ಪಡಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.