ADVERTISEMENT

ಮಧುಗಿರಿ | 45 ಕೆರೆಗಳಿಗೆ ಎತ್ತಿಹೊಳೆ ನೀರು: ಕೆ.ಎನ್. ರಾಜಣ್ಣ

₹285 ಕೋಟಿ ವೆಚ್ಚದಲ್ಲಿ ವರ್ಷದೊಳಗೆ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:45 IST
Last Updated 18 ಅಕ್ಟೋಬರ್ 2025, 6:45 IST
ಮಧುಗಿರಿಯ ಪುಟ್ಟೇನಹಳ್ಳಿ ಕೆರೆ ಬಳಿ ಶುಕ್ರವಾರ ಎತ್ತಿನಹೊಳೆ ಯೋಜನೆ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಶಾಸಕ ಕೆ.ಎನ್.ರಾಜಣ್ಣ ಪರಿಶೀಲಿಸಿದರು
ಮಧುಗಿರಿಯ ಪುಟ್ಟೇನಹಳ್ಳಿ ಕೆರೆ ಬಳಿ ಶುಕ್ರವಾರ ಎತ್ತಿನಹೊಳೆ ಯೋಜನೆ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಶಾಸಕ ಕೆ.ಎನ್.ರಾಜಣ್ಣ ಪರಿಶೀಲಿಸಿದರು   

ಮಧುಗಿರಿ: ಎತ್ತಿನಹೊಳೆ ಯೋಜನೆ ಮೂಲಕ ತಾಲ್ಲೂಕಿನ 45 ಕೆರೆಗಳಿಗೆ ನೀರು ಹರಿಸಲು ₹285 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ವರ್ಷದೊಳಗೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.

ಪಟ್ಟಣದ ಗೌರಿಬಿದನೂರು ರಸ್ತೆಯಲ್ಲಿರುವ ಮಾಟಗಾನಹಟ್ಟಿ ಬಳಿಯ ಪುಟ್ಟೇನಹಳ್ಳಿ ಕೆರೆ ಬಳಿ ಶುಕ್ರವಾರ ಎತ್ತಿನಹೊಳೆ ಯೋಜನೆ ಮೂಲಕ 45 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ತಾಲ್ಲೂಕಿನ ವ್ಯಾಪ್ತಿಗೆ 54 ಕೆರೆಗಳು ಬರಲಿದ್ದು, ಈಗ 45 ಕೆರೆಗಳಿಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನುಳಿದ ಕೆರೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

‘ತಾಲ್ಲೂಕಿನ ದೊಡ್ಡೇರಿ ಹೋಬಳಿಯ 9 ಕೆರೆಗಳು ಕೃಷ್ಣ ಮೇಲ್ದಂಡೆ ಯೋಜನೆಯಡಿ ಬರುತ್ತವೆ. ಮಲ್ಟಿ ವಿಲೇಜ್ ಸ್ಕೀಂ ಅಡಿ ಕುಡಿಯುವ ನೀರಿನ ಕಾಮಗಾರಿ ಪ್ರಾರಂಭಿಸಲು, ಮುಂದಿನ ದಿನಗಳಲ್ಲಿ ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಜಂಟಿಯಾಗಿ ಸಭೆ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

ಈ ಹಿಂದೆ 1,500 ಅಡಿವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಹಲವು ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಿರುವುದರಿಂದ ಅಂತರ್ಜಲ ವೃದ್ಧಿಯಾಗಿ 300 ಅಡಿಗೆ ನೀರು ದೊರಕುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಮಳೆ ಬಿದ್ದ ನೀರನ್ನು ತಡೆದು ನಿಲ್ಲಿಸಿಕೊಂಡರೆ ಮತ್ತಷ್ಟು ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಸಣ್ಣ ನೀರಾವರಿ ಇಲಾಖೆ ಇಇ ಮೂಡಲಗಿರಿ, ಎಇಇ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜು ಕಿರಣ್, ಗುತ್ತಿಗೆದಾರ ದೊಡ್ಡ ಹನುಮಂತಪ್ಪ ಹಾಗೂ ಮಾಲಿಮರಿಯಪ್ಪ , ಪಾಪೀರಣ್ಣ , ಮೈದನಹಳ್ಳಿ ಕಾಂತರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.