ADVERTISEMENT

ಎತ್ತಿನಹೊಳೆ: ಹಣವಿದ್ದರೂ ಸಿಗದ ಪರಿಹಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 14:32 IST
Last Updated 27 ಫೆಬ್ರುವರಿ 2024, 14:32 IST

ತುಮಕೂರು: ಎತ್ತಿನಹೊಳೆ ಯೋಜನೆಯಲ್ಲಿ ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಅನುದಾನ ಲಭ್ಯವಿದ್ದರೂ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪರಿಹಾರದ ಸಲುವಾಗಿ ಬ್ಯಾಂಕ್ ಖಾತೆಯಲ್ಲಿ ₹113.36 ಕೋಟಿ ಹಣವಿದ್ದರೂ ವಿತರಣೆ ಮಾಡದ ಭೂ ಸ್ವಾಧೀನ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೆ. 28ರಂದು ತಿಪಟೂರು ತಾಲ್ಲೂಕಿನ ಹಳೆಪಾಳ್ಯ ಹಾಗೂ ಈಡೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಭೂ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಪಡೆದು, ಪರಿಹಾರ ವಿತರಿಸಲು ಕ್ರಮ ವಹಿಸುವಂತೆ ಮಂಗಳವಾರ ನಡೆದ ಸಭೆಯಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ನಿರ್ದೇಶಿಸಿದರು.

ADVERTISEMENT

ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 3,126 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ವಾರದ ಒಳಗೆ ಹೊರಡಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ಎತ್ತಿನಹೊಳೆ ಯೋಜನೆಗೆ ವಿಶೇಷ ಭೂ ಸ್ವಾಧೀನಾಧಿಕಾರಿ ಜಿ.ಎನ್.ಮಂಜುನಾಥ, ‘ಪರಿಹಾರ ವಿತರಿಸಲು ಈಗಾಗಲೇ ನೋಟಿಸ್ ನೀಡಲಾಗಿದ್ದು, ಭೂ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸದೆ ಇರುವುದರಿಂದ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ. ಅಗತ್ಯ ದಾಖಲೆಗಳು ಸಲ್ಲಿಕೆಯಾದ ನಂತರ ಪರಿಹಾರ ಹಣ ನೀಡಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

ವಂಶವೃಕ್ಷ, ಭೂ ಹಿಡುವಳಿ ಪತ್ರ, ಋಣ ಭಾರ ರಾಹಿತ್ಯ ದೃಢೀಕರಣ ಪತ್ರ, ಪಹಣಿ, ಆಧಾರ್, ಮ್ಯುಟೇಷನ್, ಬ್ಯಾಂಕ್ ಖಾತೆ ವಿವರ, ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುವುದು ಎಂದರು.

ವಿಶೇಷ ಭೂ ಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.