ADVERTISEMENT

ಕೆವಿಕೆಯಿಂದ ‘ಶೂನ್ಯ ಶಕ್ತಿ ಶೀತಲ ಘಟಕ’ ತಂತ್ರಜ್ಞಾನದ ತರಬೇತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:30 IST
Last Updated 30 ಜುಲೈ 2025, 5:30 IST
ಶೂನ್ಯ ಶಕ್ತಿ ಶೀತಲ ಘಟಕ
ಶೂನ್ಯ ಶಕ್ತಿ ಶೀತಲ ಘಟಕ   

ತಿಪಟೂರು: ತಾಲ್ಲೂಕಿನ ಶಿವಪುರದಲ್ಲಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ‘ಶೂನ್ಯ ಶಕ್ತಿ ಶೀತಲ ಘಟಕ’ ತಂತ್ರಜ್ಞಾನದ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ವಿಜ್ಞಾನಿ ಸಿಂಧು ಪಿ.ಬಿ. ಮಾಹಿತಿ ನೀಡಿ, ಹಳ್ಳಿಗಳಲ್ಲಿ ಬಹುತೇಕ ರೈತರು ಬೆಳೆದು ತಂದ ಹಣ್ಣು, ತರಕಾರಿ ಹಾಗೂ ಬೀಜಗಳನ್ನು ಸರಿಯಾಗಿ ಶೇಖರಿಸಿಕೊಳ್ಳಲು ಉತ್ತಮ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಬಹುಮಟ್ಟಿಗೆ ಹಾಳಾಗುತ್ತದೆ. ವಿಶೇಷವಾಗಿ ಬಿಸಿಲು ಹೆಚ್ಚಾದ ದಿನಗಳಲ್ಲಿ ಈ ಸಮಸ್ಯೆ ಉಲ್ಬಣಿಸುತ್ತದೆ. ಇದಕ್ಕೆ ಪರಿಹಾರವಾಗಿ ಶೂನ್ಯ ಶಕ್ತಿ ಶೀತಲ ಘಟಕ ಅಂದರೆ ವಿದ್ಯುತ್ ಇಲ್ಲದೆ ತಂಪು ವಾತಾವರಣ ಸೃಷ್ಟಿಸುವ ಸರಳ ತಂತ್ರಜ್ಞಾನವನ್ನು ಬಳಸಬಹುದು ಎಂದು ಹೇಳಿದರು.

ಶೀತಲ ಘಟಕವನ್ನು ಇಟ್ಟಿಗೆ, ಮರಳು ಮತ್ತು ನೀರನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದಕ್ಕೆ ಯಾವುದೇ ವಿದ್ಯುತ್ ಉಪಕರಣಗಳ ಅಗತ್ಯವಿಲ್ಲ. ಇದು ನೈಸರ್ಗಿಕವಾಗಿ ತಂಪು ನೀಡುತ್ತದೆ. ಎರಡು ಇಟ್ಟಿಗೆ ಗೋಡೆಯ ನಡುವೆ ಮರಳು ತುಂಬಲಾಗುತ್ತದೆ. ಇಟ್ಟಿಗೆ ಮೇಲೆ ಪ್ರತಿದಿನ ನೀರು ಹಾಕಲಾಗುತ್ತದೆ. ಈ ನೀರು ತೇವವಾಗಿರುತ್ತದೆ. ಗಾಳಿಯಿಂದ ತಣ್ಣನೆಯ ವಾತಾವರಣ ನಿರ್ಮಿಸುತ್ತದೆ. ಈ ರಚನೆಯೊಳಗೆ ತರಕಾರಿ ಅಥವಾ ಹಣ್ಣುಗಳನ್ನು ಇರಿಸಿದರೆ ಅವುಗಳನ್ನು ಹೆಚ್ಚು ದಿನ ಶೇಖರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಗೋವಿಂದಗೌಡ ವಿ. ಮಾತನಾಡಿ, ಹೆಚ್ಚಿನ ಉಷ್ಣತೆಯ ದಿನಗಳಲ್ಲಿ ಈ ಶೀತಲ ಘಟಕದ ಒಳಗಿನ ತಾಪಮಾನ, ಹೊರಗಿನ ಹವಾಮಾನಕ್ಕಿಂತ 8ರಿಂದ 12 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಈ ತಂಪಿನಲ್ಲಿ ತರಕಾರಿಗಳು 5ರಿಂದ 8 ದಿನಗಳವರೆಗೆ, ಹಣ್ಣು, 6ರಿಂದ 10 ದಿನಗಳವರೆಗೆ ತಾಜಾವಾಗಿಯೇ ಉಳಿಯುತ್ತವೆ. ಈ ರೀತಿ ಶೇಖರಿಸಿದ ಬೆಳೆಗಳೊಂದಿಗೆ ರೈತರು ಮಾರುಕಟ್ಟೆಗೆ ತಮಗೆ ಬೇಕಾದ ಸಮಯದಲ್ಲಿ ತರುವ ಮೂಲಕ ಉತ್ತಮ ಬೆಲೆ ಪಡೆಯಬಹುದು ಎಂದರು.

ತರಬೇತಿಯಲ್ಲಿ 15 ಶಾಲೆ ವಿದ್ಯಾರ್ಥಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

ಶಿವಪುರದಲ್ಲಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ‘ಶೂನ್ಯ ಶಕ್ತಿ ಶೀತಲ ಘಟಕ’ ತಂತ್ರಜ್ಞಾನದ ತರಬೇತಿ ನೀಡಲಾಯಿತು
“ಶೂನ್ಯ ಶಕ್ತಿ ಶೀತಲ ಘಟಕ” ತಂತ್ರಜ್ಞಾನದ ತರಬೇತಿ

₹2 ಸಾವಿರ ವೆಚ್ಚದಲ್ಲಿ ನಿರ್ಮಾಣ

ರೈತರಿಗೆ ಈ ಘಟಕವನ್ನು ನಿರ್ಮಿಸಿಕೊಳ್ಳಲು ಹೆಚ್ಚಿನ ಹಣದ ಅಗತ್ಯವಿಲ್ಲ. ಒಂದರಿಂದ ಎರಡು ಸಾವಿರ ವೆಚ್ಚದಲ್ಲಿ ರೈತರು ತಾವೇ ನಿರ್ಮಿಸಬಹುದು. ಸಾಮಾನ್ಯವಾಗಿ ಐದು ಅಡಿ ಉದ್ದ ಮೂರು ಅಡಿ ಅಗಲ ಮತ್ತು ಮೂರು ಅಡಿ ಎತ್ತರದ ಶೀತಲ ಘಟಕ ತಯಾರಿಸಿ ಇದರ ಮೇಲೆ ಒದ್ದೆಯಾದ ಗೋಣಿಚೀಲದ ಹೊದಿಕೆ ಹಾಕಬೇಕು. ಮನೆಯ ಹಿತವಾದ ಪ್ರದೇಶದಲ್ಲಿ ಅಥವಾ ಮರದ ನೆರಳಿನಲ್ಲಿ ನಿರ್ಮಿಸುವುದು ಉತ್ತಮ. ವಿದ್ಯುತ್ ಇಲ್ಲದಾಗ ಶೀತಲಸಂಗ್ರಹ ಸಿಗದಾಗ ಹವಾಮಾನ ಬದಲಾಗುವ ಗ್ರಾಮೀಣ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ನೆರವಿಗೆ ಬರುತ್ತದೆ. ಸಿಂಧು ಪಿ.ಬಿ ಆಹಾರ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.