ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಐಸಿಡಿಎಸ್‌ ಖಾಸಗೀಕರಣ ವಿರೋಧ, ಕನಿಷ್ಠ ವೇತನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 6:36 IST
Last Updated 11 ಜನವರಿ 2014, 6:36 IST

ಉಡುಪಿ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಖಾಸಗೀಕರಣವನ್ನು ವಿರೋಧಿಸಿ, ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಐಸಿಡಿಎಸ್‌ ಮಿಶನ್‌ ಪ್ರಕ್ರಿಯೆಯನ್ನು ಈ ತಕ್ಷಣ ಕೈಬಿಡಬೇಕು. ಯೋಜನೆಯನ್ನು ಕಾರ್ಪೋ­ರೇಟ್‌ ಸಂಸ್ಥೆಗಳು, ಸ್ವಸಹಾಯ ಗುಂಪುಗಳಿಗೆ ಯಾವುದೇ ಕಾರಣಕ್ಕೂ ವಹಿಸಬಾರದು. ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ­ಗಳನ್ನು ಬೇರೆಯವರಿಗೆ ವರ್ಗಾಯಿಸಬಾರದು. ಅಂಗನವಾಡಿ ಕೇಂದ್ರಗಳ ಕೆಲಸದ ಒತ್ತಡ ಹೆಚ್ಚಾಗಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆ­ಯಾಗಿದೆ. ಆದ್ದರಿಂದ ವೇತನ ಹೆಚ್ಚಳ ಮಾಡ­ಬೇಕು ಎಂದು ಪ್ರತಿಭಟನಾಕರರು ಆಗ್ರಹಿಸಿದರು.

ಐಸಿಡಿಎಸ್‌ ಯೋಜನೆಯನ್ನು ಆಹಾರ ಭದ್ರತಾ ವ್ಯಾಪ್ತಿಗೆ ತರಬೇಕು. ರಾಜ್ಯದ ಎಲ್ಲ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಶಾಶ್ವತ ಶಿಶುವಿಹಾರಗಳಾಗಿ ಪರಿವರ್ತಿಸಬೇಕು. ಏಕ ಪ್ರಕಾರದ ಸೇವಾ ನಿಯಮಾವಳಿಗಳನ್ನು ರೂಪಿಸ­ಬೇಕು. ಸಹಾಯಕಿಯರ ಮಾಸಿಕ ಸಭೆ ನಡೆಸ­ಬೇಕು ಮತ್ತು ತರಬೇತಿ ನೀಡಬೇಕು. ಈಗಾಗಲೇ ನೀಡುತ್ತಿರುವ ಮರಣ ಪರಿಹಾರ ಭತ್ಯೆಯನ್ನು ರೂ.50 ಸಾವಿರಕ್ಕೆ ಏರಿಸಬೇಕು ಮತ್ತು ಸಹಾಯಕಿ­ಯರಿಗೂ ನೀಡ­ಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ರತಿ ಶೆಟ್ಟಿ, ಉಪಾಧ್ಯಕ್ಷೆ ವನಜಾ, ಕಾರ್ಯದರ್ಶಿ ಸುಶೀಲ ನಾಡ, ಕೋಶಾಧಿಕಾರಿ ಆಶಾ ಲತಾ, ಮೋಹಿನಿ, ಶಕೀಲ ಎಸ್‌ ಶೆಟ್ಟಿ, ಸುಶೀಲ ಬಗ್ವಾಡಿ, ಸಿಐಟಿಯು ಮುಖಂಡರಾದ ದಾಸ ಭಂಡಾರಿ, ಸುರೇಶ್‌ ಕಲ್ಲಾಗರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.