ADVERTISEMENT

ಅಂಪಾರು: ಖಾಸಗಿ ಬಸ್ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:15 IST
Last Updated 25 ಫೆಬ್ರುವರಿ 2012, 10:15 IST

ಸಿದ್ದಾಪುರ: ಖಾಸಗಿ ಬಸ್‌ಗಳು ಅನಧಿಕೃತವಾಗಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಂಪಾರಿನಲ್ಲಿ ಖಾಸಗಿ ಬಸ್‌ಗಳನ್ನು ನಿಲ್ಲಿಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು.

ಕುಂದಾಪುರ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಯಾಣಿಕರ ಬೇಡಿಕೆ ಮೇರೆಗೆ ಓಡಾಡುತ್ತಿದ್ದ ಸರ್ಕಾರಿ ಬಸ್‌ಗಳಿಗೆ ಪೈಪೋಟಿ ಒಡ್ಡುವ ಸಲುವಾಗಿ  ಪರವಾನಗಿ ಇಲ್ಲದೆಯೇ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಕುಂದಾಪುರ ತಾಲ್ಲೂಕು ಸರ್ಕಾರಿ ಬಸ್ ಪ್ರಯಾಣಿಕರ ವೇದಿಕೆ ಮತ್ತು ಅಂಪಾರು ವೇದಿಕೆ ಜಂಟಿಯಾಗಿ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿತ್ತು.

ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾದ ವಾಹನ ತಪಾಸಣೆ ಸಂಜೆವರೆಗೂ ಮುಂದುವರಿಯಿತು. ಕೆಲವು ಬಸ್‌ಗಳಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸಲು ಯಾವುದೇ ದಾಖಲೆ ಪತ್ರಗಳಿರಲಿಲ್ಲ. ಹಲವು ಬಸ್‌ಗಳು ನಿಗದಿತ ಸಮಯದಲ್ಲಿ ಸಂಚರಿಸದಿರುವುದು ಗಮನಕ್ಕೆ ಬಂತು.

`ಸಾರ್ವಜನಿಕರ ದೂರನ್ನು ಪರಿಗಣಿಸಿ ಈ ಪ್ರದೇಶದ ಖಾಸಗಿ ಬಸ್‌ಗಳ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಪರವಾನಗಿ ಇಲ್ಲದ ವಾಹನಗಳ ಮಾಲೀಕರಿಗೆ ನೊಟೀಸ್ ಮಾಡಲಾಗಿದೆ~ ಎಂದು ಉಡುಪಿ ಹಿರಿಯ ಪ್ರಾದೇಶಿಕ ಸಾರಿಗೆ ವಾಹನ ನಿರೀಕ್ಷಕ ಪಿ.ಎಸ್.ಹಿರೇಮಠ `ಪ್ರಜಾವಾಣಿ~ಗೆ  ಹೇಳಿದರು.

ಕಾರ್ಯಾಚರಣೆಯಲ್ಲಿ ಮೋಟಾರ್ ವಾಹನ ನಿರೀಕ್ಷಕ ಮಾರುತಿ ನಾಯ್ಕ, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಚಾರಾ ಜಯಂತ ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ತಪಾಸಣೆ ಸಂದರ್ಭ ಕುಂದಾಪುರ ಸರ್ಕಾರಿ ಬಸ್ ಪ್ರಯಾಣಿಕರ ಹಿತ ರಕ್ಷಣೆ ವೇದಿಕೆ ಕಾರ್ಯದರ್ಶಿ ಮನೋಹರ ಶೆಟ್ಟಿ, ಅಂಪಾರು ಸರ್ಕಾರಿ ಬಸ್ ಹಿತರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಕೆ.ಅಶೋಕ, ಅಂಪಾರು ನಾಗರಿಕಾ ಹಿತರಕ್ಷಣೆ ವೇದಿಕೆಯ ಆನಂದ, ಆಜ್ರಿ ವೇದಿಕೆ ಅಧ್ಯಕ್ಷ ಸುರೇಶ ಹೆಬ್ಬಾರ ಆಜ್ರಿ, ಕಂಡ್ಲೂರು ಅಧ್ಯಕ್ಷ ಎಂ.ಜಾಫರ್ ಸಾಹೇಬ್, ಹೊಸಂಗಡಿ ವೇದಿಕೆ  ಅಧ್ಯಕ್ಷ ಆನಂದ ಶೆಟ್ಟಿ, ತಾ.ಪಂ.ಸದಸ್ಯ ದಿನಕರ ಹೆಗ್ಡೆ, ಅಂಪಾರು ಗ್ರಾ.ಪಂ ಮಾಜಿ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಸದಸ್ಯ ಹರೀಶ್ ಶೆಟ್ಟಿ, ಧರ್ಮಸ್ಥಳ ಯೋಜನೆಯ ಉದಯಕುಮಾರ್ ಶೆಟ್ಟಿ,  ವೇದಿಕೆ ಸದಸ್ಯರಾದ ಅಬ್ದುಲ್ ಸಾಮದ್, ಮಂಜಯ್ಯ ಶೆಟ್ಟಿ ಹಳ್ನಾಡು, ಗಣಪತಿ ಬೈಲೂರು, ಹೆನ್ನಾಬೈಲು ಶೇಖರ ಶೆಟ್ಟಿ,ಪ್ರಭಾಕರ್ ಹೆಗ್ಡೆ ಮತ್ತಿತರರು ಇದ್ದರು.
 

`ಅನಧಿಕೃತ ಸಂಚಾರ ವಿರುದ್ಧ ಕಠಿಣ ಕ್ರಮ~
`ಕುಂದಾಪುರ ತಾಲೂಕಿನ ಸಿದ್ದಾಪುರ ಮಾರ್ಗದ ಎಲ್ಲಾ ಖಾಸಗಿ ಬಸ್‌ಗಳ ದಾಖಲೆ ಪರಿಶೀಲನೆ ನಡೆಸಿದ್ದು, ದಾಖಲೆ ಇಲ್ಲದ ಸಂಚರಿಸುತ್ತಿದ್ದ ವಾಹನಗಳ ಮಾಲೀಕರಿಗೆ ಸೂಕ್ತ ಉತ್ತರ ನೀಡುವಂತೆ ನೊಟೀಸ್ ಮಾಡಲಾಗುತ್ತದೆ. ಸಾರಿಗೆ ಇಲಾಖೆಯು ಅನಧಿಕೃತ ಸಂಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು~ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್ ಎಚ್.ಎನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT