ADVERTISEMENT

ಅಧಿಕಾರದಲ್ಲಿ ಇದ್ದಾಗ ದೇವೇಗೌಡರ ಕೊಡುಗೆ ಏನು?

ಕಾಂಗ್ರೆಸ್‌ ಅಭ್ಯರ್ಥಿ ಎ.ಮಂಜು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 11:04 IST
Last Updated 19 ಮಾರ್ಚ್ 2014, 11:04 IST

ಕಡೂರು: ಅಧಿಕಾರದ ಎಲ್ಲ ಹುದ್ದೆ­ಗಳ­ನ್ನೂ ಅನುಭವಿಸಿ ಇದೇ ಕಡೆಯ ಚುನಾ­ವಣೆ ಎಂದು ಪದೇ ಪದೇ ಕಣ್ಣೀರು ಹರಿಸುವ ಮಾಜಿ ಪ್ರಧಾನಿ ಎಚ್‌.ಡಿ.­ದೇವೇಗೌಡರು ಅಧಿಕಾರದಲ್ಲಿ ಇದ್ದಾಗ ರಾಜ್ಯ ಅಥವಾ ರಾಷ್ಟ್ರದ ಜನತೆಗೆ ಉಪಯೋಗವಾ­ಗು­ವಂತೆ ನೀಡಿದ ಕೊಡುಗೆಯಾದರೂ ಏನು? ಎಂದು ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಎ.ಮಂಜು ಪ್ರಶ್ನಿಸಿದ್ದಾರೆ.

ಕಡೂರು ಪಟ್ಟಣದ ಬನಶಂಕರಿ ಸಮುದಾಯಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

50 ವರ್ಷಗಳಿಂದ ಅಧಿಕಾರದ ಅನೇಕ ಸ್ಥಾನದಲ್ಲಿದ್ದ ದೇವೇಗೌಡರ ಕಣ್ಣಿಗೆ ಒಣಗಿದ ತೆಂಗಿನ ತೋಟಗಳು ಈಗ ಕಣ್ಣಿಗೆ ಬೀಳುತ್ತಿರುವುದು ಹಾಸ್ಯಾಸ್ಪ­ದವಲ್ಲವೇ? ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 43 ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಡಾ.ಪರಮಶಿವಯ್ಯ ನೇತೃತ್ವದ ಆಯೋಗ ರಚಿಸಿ ಎತ್ತಿನ ಹೊಳೆ ಯೋಜನೆಗೆ ರೂಪು ನೀಡಿದಾಗ ಇದು ಅಸಂಗತ ಮತ್ತು ಸಾಧು­­ವಲ್ಲದ ಯೋಜನೆ ಎಂದು ದೇವೇ­ಗೌಡರು ಟೀ­ಕಿ­ಸಿ­ದ್ದರು. ಅವರದೇ ಪಕ್ಷದ ಅರಸೀಕೆರೆ ಶಾಸಕರು ಈ ಯೋ­ಜ­ನೆಯ ಫಲಾನು­ಭವಿ ತಾಲ್ಲೂಕು ತಮ್ಮದು ಆಗಲಿ ಎಂದು ಒತ್ತಾಯಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌  28 ಕ್ಷೇತ್ರಗಳಲ್ಲಿ ತನ್ನ ಸ್ವಂತ ಅಭ್ಯರ್ಥಿಗಳನ್ನು ಹಾಕುವುದೂ ಕಷ್ಟವಿದ್ದು ಯಾವ ಪಕ್ಷದಿಂದ ಯಾರು ಬರುತ್ತಾರೆ ಎಂದು ಕಾಯುತ್ತಿದ್ದಾರೆ, ಕುಟುಂಬ ರಾಜಕಾರಣ, ಜಾತಿ ರಾಜ­ಕಾರಣ ಹುಟ್ಟುಹಾಕಿದ ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಡಿಐಎಸ್‌ ಮೂಲಕ ಕಪ್ಪುಹಣ ಬಿಳಿ ಹಣವಾಗಲು ಶ್ರೀಮಂತರಿಗೆ ಸಹಕರಿಸಿದ್ದು ಮತ್ತು ಕಂಟ್ರಾಕ್ಟ್‌ ಪದ್ದತಿಯನ್ನು ಆಧುನೀಕರಣ ಗೊಳಿಸಿದ್ದೇ ಸಾಧನೆ ಎಂದು ಟೀಕಿಸಿದರು.

ಹಾಸನ ಜಿಲ್ಲಾ ಕಾಂಗ್ರೆಸ್‌ ಮುಖಂಡ ಎಸ್‌.ಎಂ.ಆನಂದ್‌, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.