ADVERTISEMENT

ಅಪಪ್ರಚಾರ ಬಿಡಿ, ದಾಖಲೆ ಸಮೇತ ಸಾಬೀತುಪಡಿಸಿ

ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆ ಸವಾಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 5:09 IST
Last Updated 9 ಏಪ್ರಿಲ್ 2014, 5:09 IST

ಪ್ರಜಾವಾಣಿ ವಾರ್ತೆ
ಚಿಕ್ಕಮಗಳೂರು: ‘ತಮ್ಮ ವಿರುದ್ಧ ಟೀಕೆಗೆ ಬೇರಾವುದೇ ವಿಚಾರಗಳಿಲ್ಲ ಎಂಬ ಕಾರಣದಿಂದ ಅಡಿಕೆ ನಿಷೇಧ ಎಂಬ ಹುಸಿ ಸುಳ್ಳನ್ನು ಹೇಳುವ ಮೂಲಕ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರು, ದಾಖಲೆಗಳೊಂದಿಗೆ ಸಾಬೀತು­ಪಡಿಸಿದಲ್ಲಿ ತಾವು ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಸಂಸದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸವಾಲೆಸೆದರು.

ನಗರದಲ್ಲಿ ಮಂಗಳವಾರ ಲಕ್ಯಾ ಮತ್ತು ಸಖರಾಯಪಟ್ಟಣದಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಅಡಿಕೆ ಬೆಳೆಗಾರರಿಗೆ ತಮ್ಮ ಶ್ರಮದಿಂದಾಗಿ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಿದೆ. ವಿದೇಶದಿಂದ ಆಮದಾಗುತ್ತಿದ್ದ ಅಡಿಕೆಯಿಂದಾಗಿ ನಮ್ಮ ದೇಶದ ಅಡಿಕೆಗೆ ಬೆಲೆ ಇಲ್ಲದಂತಾಗಿತ್ತು. ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಸಚಿವರು ಮತ್ತು ಉನ್ನತಾಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರದಲ್ಲಿ ಮಾತುಕತೆ ನಡೆಸಿದ ಪರಿಣಾಮ ಆಮದು ಅಡಿಕೆಗೆ ₨250 ತೆರಿಗೆ ವಿಧಿಸಲು ಸರ್ಕಾರ ಕ್ರಮ ಕೈಗೊಂಡಿತು.

ಅದರಿಂದಾಗಿ ಆಮದು ಅಡಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಅಡಿಕೆ ಬೆಲೆ ₨8 ಸಾವಿರದಿಂದ 30 ಸಾವಿರಕ್ಕೆ ಜಿಗಿಯಿತು. ಇದು ಜಿಲ್ಲೆಯ ಬೆಳೆಗಾರರಿಗಲ್ಲದೆ ದೇಶದ ಎಲ್ಲ ಬೆಳೆಗಾರರಿಗೆ ಲಾಭ ಆಗಿದೆ ಎಂದರು.

ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹಳದಿ ಎಲೆರೋಗ ಮತ್ತು ಕೊಳೆರೋಗದಿಂದ ಅಡಿಕೆ ಬೆಳೆ ತೀವ್ರ ಹಾನಿಗೊಂಡಿತ್ತು. ಅದನ್ನು ತಾವು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಒತ್ತಡ ಹಾಕಿದ ಪರಿಣಾಮವಾಗಿ ಗೋರಕ್ ಸಿಂಗ್ ಸಮಿತಿ ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲ್ಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಪ್ರದೇಶಗಳನ್ನು ಸೇರಿಸುವ ಮೂಲಕ ಪರಿಹಾರ ಪ್ಯಾಕೇಜ್‌ಗೆ ಅಡ್ಡಗಾಲಾದರು ಎಂದು ಆರೋಪಿಸಿದರು.

ತಾವು ಒಬ್ಬ ವಕೀಲರಾಗಿದ್ದು, ಅಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಪಡೆಯಲಾಗಿದೆ. ಅಡಿಕೆ ನಿಷೇಧದ ಬಗ್ಗೆ ಯಾವುದೇ ವಿಚಾರ ಇಲ್ಲ. ಅದು ಗುಟ್ಕಾ ನಿಷೇಧ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದೆ. ಆದರೆ, ಬಿಜೆಪಿ ಸುಳ್ಳು ಆರೋಪ ಮಾಡುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯಲು ನಡೆಸಿರುವ ಹುನ್ನಾರ ಫಲಿಸುವುದಿಲ್ಲ. ಈ ಬಗ್ಗೆ ತಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನಿಮ್ಮ ಬಳಿಯಲ್ಲಿ ದಾಖಲೆಗಳಿದ್ದರೆ ಸಾಬೀತುಪಡಿಸಿದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮತ್ತು ನಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಅಡಿಕೆ ಬೆಳೆಗಾರರಿಗೆ ಆಗಿರುವ ಅನುಕೂಲಗಳ ಕುರಿತು ಮಾಹಿತಿಗಳನ್ನು ತಾವು ಕಲೆ ಹಾಕಿದ್ದು, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬೆಳೆಗಾರರಿಗೆ ಯಾವುದೇ ಅನುಕೂಲವಾಗಿಲ್ಲ. ಆದರೆ, ಯುಪಿಎ ಸರಕಾರ ದೊಡ್ಡ ಪ್ರಮಾಣದಲ್ಲಿ ಬೆಳೆಗಾರರಿಗೆ ಅನುಕೂಲಗಳನ್ನು ಕಲ್ಪಿಸಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಕರಗಡದ ದೇವಿಕೆರೆಯಿಂದ ಕುಡಿಯಲು ಬೆಳವಾಡಿ ಕೆರೆಗೆ ನೀರು ಹರಿಸುವ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳದ ಇಲ್ಲಿನ ಶಾಸಕರು ಈಗ ₨10.5 ಕೋಟಿ ಅನುದಾನದ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ಅದಕ್ಕೆ ಯಾವುದೇ ತನಿಖೆಗೂ ಸಿದ್ಧವಾಗಿ ನಾವಿದ್ದೇವೆ. ಆದರೆ, ಅದಕ್ಕೆ ಮೊದಲು ₨800 ಕೋಟಿ ತಂದು ಕ್ಷೇತ್ರ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡು ಚುನಾವಣೆಯಲ್ಲಿ ಆರಿಸಿ ಬಂದಿದ್ದಾರೆ. ₨800 ಕೋಟಿ ಅನುದಾನದ ಬಗ್ಗೆ ತನಿಖೆ ಆಗಲಿ ಎಂದು ಸವಾಲೆಸೆದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ, ಕಾರ್ಯದರ್ಶಿ ರತನ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಚಂದ್ರಶೇಖರ್, ಉಪಾಧ್ಯಕ್ಷ ರವೀಶ್ ಕ್ಯಾತನಬೀಡು, ಹಿರಿಯ ಮುಖಂಡ ಕಲ್ಮರುಡಪ್ಪ, ಶ್ರೀನಿವಾಸಗೌಡ, ಮರಿಗೌಡ, ಅಚ್ಚುತರಾವ್, ಎನ್.ಡಿ.ಚಂದ್ರಪ್ಪ, ರವಿಶಂಕರ್, ಗ್ರಾಮ ಪಂಚಾಯಿತಿ ಸದಸದ್ಯರಾದ ಖದರ್ ವಲ್ಲಿ, ವೆಂಟೇಶನಾಯ್ಕ, ಮೋಹನನಾಯ್ಕ, ಸತೀಶ್, ಎಪಿಎಂಸಿ ನಿರ್ದೇಶಕ ಭದ್ರೇಗೌಡ, ನಗರಸಭೆ ಸದಸ್ಯ ಎಚ್.ಎಸ್.ಪುಟ್ಟಸ್ವಾಮಿ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವಸಂತ ರಾಮಚಂದ್ರ, ಯುವ ಮುಖಂಡ ಅಪ್ಪು ಪಾಲ್ಗೊಂಡಿದ್ದರು.

ಸಖರಾಯಪಟ್ಟಣದಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಉಪಾಧ್ಯಕ್ಷ  ಚಂದ್ರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.