ADVERTISEMENT

ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಸಿಗದ ಪರಿಹಾರ

ಕೃಷಿ ಕೂಲಿಕಾರರ ಸಂಘದ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 14:13 IST
Last Updated 10 ಜುಲೈ 2013, 14:13 IST

ಉಡುಪಿ: `ಎರಡು ವರ್ಷಗಳಿಂದ ವಸತಿಹೀನ ಮತ್ತು ನಿವೇಶನ ರಹಿತರ ಸಮಸ್ಯೆಯನ್ನು ಸರ್ಕಾರದ ಮುಂದಿಡುತ್ತಿದ್ದು 2011 ರಿಂದ 2013ರವರೆಗೆ 5,786 ಅರ್ಜಿ ಸಲ್ಲಿಸಿದ್ದು ಪರಿಹಾರ ಇನ್ನೂ ಸಿಕ್ಕಿಲ್ಲ' ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ದೋಗು ಸುವರ್ಣ ಆರೋಪಿಸಿದರು.

ವಸತಿಹೀನ ಮತ್ತು ನಿವೇಶನ ರಹಿತರ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಉಡುಪಿ ತಾಲ್ಲೂಕು ಸಮಿತಿ ಸದಸ್ಯರು ಬನ್ನಂಜೆಯ ತಾಲ್ಲೂಕು ಕಚೇರಿ ಎದುರು ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.  

ವಸತಿಹೀನರು, ನಿವೇಶನ ರಹಿತರ ಸಮಸ್ಯೆಗಳನ್ನು ಪರಿಹರಿಸಿ ಹಿಂದಿನ ಬಿಜೆಪಿ ಸರ್ಕಾರ ನಿವೇಶನ ನೀಡುವುದಾಗಿ ಹೇಳಿದರೂ ಇದುವರೆಗೆ ಜಾರಿಯಾಗಿಲ್ಲ. ದಿನಂದಿನ ದಿನಕ್ಕೆ ಬೆಲೆ ಹೆಚ್ಚಾಗುತ್ತಿದ್ದು ನಿವೇಶನ ಹಾಗೂ ವಸತಿಹೀನರ ಆದಾಯ ಹೆಚ್ಚುತ್ತಿಲ್ಲ. ನಿವೇಶನ ರಹಿತರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಬಾಡಿಗೆ ದರವೂ ಹೆಚ್ಚಾಗಿದ್ದು, ಇದರಿಂದ ಬಾಡಿಗೆ ಮನೆ ಬಿಟ್ಟು ಸೂರಿನಡಿ ವಾಸಿಸುತ್ತಿದ್ದಾರೆ ಎಂದರು.

ಉಡುಪಿ ನಗರಸಭೆ ಜಾಗದ ಅಭಾವದಿಂದ ಅಪಾರ್ಟ್‌ಮೆಂಟ್ ಮಾದರಿಯಲ್ಲಿ ಮನೆ ನಿರ್ಮಿಸಿ ವಿತರಿಸಲು ಯೋಜನೆ ರೂಪಿಸಿದೆ, ಆರು ತಿಂಗಳು ಕಳೆದರೂ ಪ್ರಗತಿಯಾಗಿಲ್ಲ. ವಸತಿ ಹೀನ ಮತ್ತು ನಿವೇಶನ ರಹಿತರಿಗೆ ವಸತಿ ಮತ್ತು ನಿವೇಶನ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

`ಇಲಾಖೆಗಳಿಗೆ ಪ್ರಾಣಿ ಪಕ್ಷಿಗಳ ಲೆಕ್ಕಾಚಾರವಿದ್ದು, ನಿವೇಶನ ವಸತಿಹೀನರ ಲೆಕ್ಕಾಚಾರದ ಅಂಕಿ ಸಂಖ್ಯೆಗಳಿಲ್ಲ. ಸ್ಪಷ್ಟ ಅಂಕಿ ಅಂಶಗಳ ಮೂಲಕ ಕೇರಳ ರಾಜ್ಯದಲ್ಲಿ ನಿವೇಶನ ರಹಿತ ಮತ್ತು ವಸತಿಹೀನರಿಗೆ ನಿವೇಶನ-ವಸತಿ ನೀಡಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಪರಿಹಾರ ಸಿಕ್ಕಿಲ್ಲ. ಈ ಪ್ರತಿಭಟನೆ ದೊಡ್ಡಪ್ರಮಾಣದಲ್ಲಿ ಹಮ್ಮಿಕೊಂಡು ಸರ್ಕಾರದ ಕಿವಿ ಮತ್ತು ಕಣ್ಣು ತೆರೆಸಬೇಕಾಗಿದೆ' ಎಂದು ಕುಂದಾಪುರ ತಾಲ್ಲೂಕು ಸಂಘದ ಮುಖಂಡ ರಾಜು ಪಡುಕೋಣೆ  ಹೇಳಿದರು.

ಮುಖಂಡರಾದ ಕೆ.ಶಂಕರ್, ವಿಶ್ವನಾಥ ರೈ, ಕೆ.ಲಕ್ಷ್ಮಣ, ವೆಂಕಟೇಶ ಕೋಣಿ, ಪುಷ್ಪ ಕಾಪು, ಸಾಯಿರಾ, ರವಿಕಲಾ ಸಿರಾಜುನ್ನಿಸಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.