ADVERTISEMENT

ಉಡುಪಿ: 25 ಸ್ಥಾನಗಳಲ್ಲಿ 16 ಬಿಜೆಪಿ, 9 ಕಾಂಗ್ರೆಸ್‌ಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 11:25 IST
Last Updated 5 ಜನವರಿ 2011, 11:25 IST

ಉಡುಪಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜಿಲ್ಲೆ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ಜಿಲ್ಲಾ ಪಂಚಾಯಿತಿಯ ಅಧಿಕಾರದ ಗದ್ದುಗೆ ಏರಲಿದೆ. ಜತೆಗೆ ಮೂರು ತಾಲ್ಲೂಕು ಪಂಚಾಯಿತಿಗಳೂ ಬಿಜೆಪಿ ವಶವಾಗಿವೆ. ಜಿಲ್ಲಾ ಪಂಚಾಯಿತಿಯ ಒಟ್ಟು 25 ಸ್ಥಾನಗಳಲ್ಲಿ 16 ಸ್ಥಾನಗಳು ಬಿಜೆಪಿ ಮುಡಿಗೇರಿವೆ. 9 ಸ್ಥಾನಗಳನ್ನಷ್ಟೇ ಗೆಲ್ಲಲು ಕಾಂಗ್ರೆಸ್ ಶಕ್ತವಾಗಿದೆ. ಜೆಡಿಎಸ್ ಖಾತೆ ತೆರೆಯುವುದರಲ್ಲಿ ವಿಫಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನ ಕಳೆದುಕೊಂಡಿದ್ದರೆ, ಬಿಜೆಪಿ ಆ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ತಾಲ್ಲೂಕು ಪಂಚಾಯಿತಿ: ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕು ಪಂಚಾಯಿತಿಯಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನದಲ್ಲಿದ್ದರೆ, ಸಿಪಿ–ಎಂನ ಒಬ್ಬ ಅಭ್ಯರ್ಥಿ, ಒಬ್ಬ ಪಕ್ಷೇತರ ಗೆದ್ದಿದ್ದಾರೆ. ಜೆಡಿಎಸ್‌ನದು ಶೂನ್ಯ ಸಂಪಾದನೆ. ಉಡುಪಿ ತಾ.ಪಂ.ನಲ್ಲಿ ಈ ಮೊದಲು 17 ಸ್ಥಾನ ಗಳಿಸಿದ್ದ ಬಿಜೆಪಿ, ತನ್ನ ಶಕ್ತಿಯನ್ನು ಈ ಬಾರಿ 23ಕ್ಕೆ ಹೆಚ್ಚಿಸಿಕೊಂಡಿದ್ದರೆ, ಕುಂದಾಪುರ ತಾ.ಪಂನಲ್ಲಿ ತನ್ನ ಸಾಮರ್ಥ್ಯವನ್ನು 11ರಿಂದ 22ಕ್ಕೆ ಹೆಚ್ಚಿಸಿಕೊಂಡಿದೆ.

ಕಾರ್ಕಳ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 2 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚು ಪಡೆದಿದೆ. ಇಲ್ಲಿನ 5 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ 4 ಸ್ಥಾನ ಹಾಗೂ ಕಾಂಗ್ರೆಸ್ 1ರಲ್ಲಿ ಗೆಲುವು ಸಾಧಿಸಿತ್ತು. ತಾ.ಪಂ.ನಲ್ಲಿ ಕಳೆದ ಬಾರಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 16 ಸ್ಥಾನಗಳನ್ನು ಗೆದ್ದು ಹೆಚ್ಚುವರಿಯಾಗಿ 4 ಕ್ಷೇತ್ರದ ಲಾಭ ಗಳಿಸಿದೆ.

ರಾಜೀನಾಮೆ: ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಪೂಜಾರಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈಗಿನ ಚುನಾವಣೆ ಗೆಲುವು ಪಕ್ಷಕ್ಕಾದ ನೈತಿಕ ಜಯ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಬಹುತೇಕ ಹೊಸ ಮುಖಗಳನ್ನೇ ಕಣಕ್ಕಿಳಿಸಿದ್ದವು. ಹೊಸ ಮುಖಗಳಲ್ಲಿ ಬಹಳಷ್ಟು ಮಂದಿ ಜಯಗಳಿಸಿದ್ದರೆ, ಅನುಭವಿ ಘಟಾನುಘಟಿ ಸ್ಪರ್ಧಾಳುಗಳು ಸೋಲುಂಡಿದ್ದಾರೆ. ಹಳಬರಲ್ಲಿ ಗೆದ್ದವರೆಂದರೆ ಯಡ್ತರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ.

ಗಣ್ಯರ ಸೋಲು:
ಕಾಂಗ್ರೆಸ್‌ನಿಂದ ಕಾಪು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸರಸು ಡಿ.ಬಂಗೇರಾ, ಶೀರೂರಿನ ಶಾರದಾ ಡಿ.ಬೀಜೂರು, ಮಿಯಾರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಿ.ಪಂ. ಉಪಾಧ್ಯಕ್ಷ ಡಾ. ಸಂತೋಷ ಕುಮಾರ್ ಶೆಟ್ಟಿ ಪರಾಭವಗೊಂಡಿದ್ದಾರೆ. ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದ ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಸುಧಾಕರ್ ಕಲ್ಯಾಣಪುರದಲ್ಲಿ ಸೋಲುಂಡಿದ್ದಾರೆ. –ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಉದಯ ಶೆಟ್ಟಿ ಶಿರ್ವದಲ್ಲಿ ಸೋತಿದ್ದರೆ, ಉದ್ಯಾವರದಲ್ಲಿ ನಯನಾ ಗಣೇಶ್ ಪರಾಜಿತರಾಗಿದ್ದಾರೆ. ಸೇನಾಪುರದಲ್ಲಿ ಸ್ಪರ್ಧಿಸಿದ್ದ ಕುಂದಾಪುರ ತಾ.ಪಂ. ಮಾಜಿ ಅಧ್ಯಕ್ಷ ರಾಜು ದೇವಾಡಿಗ ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.