ADVERTISEMENT

ಉದ್ಯಾವರ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:35 IST
Last Updated 4 ಅಕ್ಟೋಬರ್ 2011, 8:35 IST

ಕಟಪಾಡಿ: ಉದ್ಯಾವರ ಸಮೀಪದ ಪಾಂದೆಯಲ್ಲಿ ಜ್ಯುವೆಲ್ಲರಿ ಮಾಲೀಕರೊಬ್ಬರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಸಾವಿರ ರೂಪಾಯಿ ನಗದು ಕಳವಾಗಿರುವುದು ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಪಾಂದೆ ವಾಸಿ, ಉದ್ಯಾವರ ನವರತ್ನ ಜ್ಯುವೆಲ್ಲರಿ ಮಾಲೀಕ ಕೃಷ್ಣ ಆಚಾರ್ಯ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಭಾನುವಾರ ಮಧ್ಯಾಹ್ನ ಸುರತ್ಕಲ್‌ನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಮರಳಿದಾಗ ಮನೆಯ ಮುಖ್ಯದ್ವಾರದ ಚಿಲಕ ಪುಡಿಯಾಗಿತ್ತು. ಮನೆ ಒಳಗಿನ ಕಪಾಟಿನಲ್ಲಿದ್ದ ಬಟ್ಟೆ ಇನ್ನಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.

ಕಪಾಟಿನಲ್ಲಿದ್ದ ಚಿನ್ನದ 1 ಜತೆ ಬಿಳಿ ಕಲ್ಲಿನ ಬಳೆ, 2 ಜತೆ ಮ್ಯೋಜಿಕ್ ಬಳೆ, 2 ಸರ, 1ಬ್ರೇಸ್ಲೆಟ್, 1ನೆಕ್ಲೇಸ್ ಪೆಂಡೆಂಟ್, 8 ಜತೆ ಬೆಂಡೊಲೆ, 2 ಜತೆ ಜುಮಕಿ, 4 ಜತೆ ಬೇಬಿ ಬೆಂಡೊಲೆ, 1 ನವರತ್ನ ಉಂಗುರ, 1 ವಜ್ರದ ಹರಳಿನ ಉಂಗುರ, 1 ಸಾದಾ ಉಂಗುರ, 1 ನೆಕ್ಲೆಸ್, 1 ಲಕ್ಷ್ಮಿ ಪೆಂಡೆಂಟ್, 2 ವಜ್ರದ ಹರಳಿನ ಮೂಗುತಿ, 220 ಗ್ರಾಂ ಬೆಳ್ಳಿ ಆಭರಣ ಕಳವಾಗಿದೆ. ಕಳವಾದ ಸ್ವತ್ತಿನ ಒಟ್ಟು ಮೌಲ್ಯ ರೂ 7 ಲಕ್ಷ ಎಂದು ಅಂದಾಜಿಸಲಾಗಿದೆ.

ಎಸ್.ಪಿ. ರವಿಕುಮಾರ್, ಹೆಚ್ಚುವರಿ ಎಸ್.ಪಿ. ವೆಂಕಟೇಶಪ್ಪ, ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಚೆಲುವರಾಜು, ಎಸ್.ಐ. ಮೋಹನ ಕೊಟ್ಟಾರಿ, ಗಿರೀಶ್ ಕುಮಾರ್ ಎಸ್, ಶ್ವಾನದಳ, ಡಿ.ಸಿ.ಐ.ಬಿ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡ್ದ್ದಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.