ADVERTISEMENT

ಕಾಂಗ್ರೆಸ್‌ ಸಾಮಾಜಿಕ ಸೌಹಾರ್ದ ಕಾಪಾಡಿದೆ: ಆಸ್ಕರ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 9:42 IST
Last Updated 4 ನವೆಂಬರ್ 2017, 9:42 IST
ಕಾರ್ಕಳ ಬ್ಲಾಕ್‌ ಕಾಂಗ್ರೆಸ್ ಆಯೋಜಿಸಿದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿದರು.
ಕಾರ್ಕಳ ಬ್ಲಾಕ್‌ ಕಾಂಗ್ರೆಸ್ ಆಯೋಜಿಸಿದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿದರು.   

ಕಾರ್ಕಳ: ಭಾರತ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಆಡಳಿತಾವಧಿಯಲ್ಲಿ ಜಾತ್ಯ ತೀತ, ಧರ್ಮಾತೀತ ನೆಲೆಯ ಸಮಗ್ರ ಸಾಮಾ ಜಿಕ ಸೌಹಾರ್ದತೆಯನ್ನು ನಿರಂತರ ಕಾಪಾಡಿಕೊಂಡು ಬಂದಿದೆ ಎಂದು ರಾಜ್ಯಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಹೇಳಿದರು.

ನಗರದ ಬ್ಲಾಕ್‌ಕಾಂಗ್ರೆಸ್ ಆಯೋಜಿಸಿದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾರ್ಗದರ್ಶನ ನೀಡಿದ ಅವರು, ‘ಇಂದು ಕೆಲವೇ ಕೆಲವು ಸ್ಥಾಪಿತ ಹಿತಾಸಕ್ತಿಗಳ ಪಟ್ಟಭದ್ರ ಸಿದ್ಧಾಂತಕ್ಕೆ ಸಾಮಾಜಿಕ ಸೌಹಾರ್ದತೆ ಬಲಿಯಾಗುತ್ತಿದೆ. ಹೀಗಾಗಿ, ಅದು ತನ್ನ ಮೂಲನೆಲೆಯನ್ನು ಕಳೆದುಕೊಂಡು ದೇಶದಾದ್ಯಂತ ಪ್ರಜಾಕ್ಷೋಭೆಗೆ ಹೇತುವಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದ ಆಡಳಿತ ವೈಖರಿಯೇ ಕಾರಣವಾಗಿದೆ ಎಂದರು.

ಸಾಮಾಜಿಕ ಸಂಘರ್ಷ ಮತ್ತು ಸಮಸ್ಯೆಗಳನ್ನು ವೈಭವೀಕರಿಸುವುದನ್ನೇ ತನ್ನ ಧ್ಯೇಯವಾಗಿರಿಸಿಕೊಳ್ಳದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಯುವ ಕಾಂಗ್ರೆಸ್ ಶ್ರಮಿಸಬೇಕಾಗಿದೆ. ಈ ನೆಲೆಯಲ್ಲಿ ಯುವ ಕಾಂಗ್ರೆಸ್ ದಿ. ರಾಜೀವ ಗಾಂಧಿಯವರ ಆದರ್ಶವನ್ನು ಪಾಲಿಸಬೇಕು ಎಂದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳೇ ಪ್ರಚಾರದ ವಸ್ತುವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಾಧನೆಗಳ ಪಟ್ಟಿಯ ಅಧ್ಯಯನಕ್ಕೆ ಹೆಚ್ಚಿನ ಗಮನಕೊಡಬೇಕು ಎಂದರು. ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಯುವ ಕಾಂಗ್ರೆಸ್ ನಡೆದು ಬಂದ ದಾರಿಯ ಕುರಿತು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆವೆಲಿನ್ ಆರ್. ಲೂಯಿಸ್, ಮಂಜುನಾಥ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕೃಷ್ಣ, ಪುರಸಭಾ ಸದಸ್ಯ ಶುಭದ ರಾವ್, ಸದಾಶಿವ ದೇವಾಡಿಗ, ಪ್ರಶಾಂತ ಶೆಟ್ಟಿ ಪಳ್ಳಿ, ಶಶಿಧರ ಭಟ್, ಉಮೇಶ ಕಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.