ಸಾಲಿಗ್ರಾಮ (ಬ್ರಹ್ಮಾವರ): ಅತಿಯಾದ ಆತ್ಮವಿಶ್ವಾಸ ತೋರದೆ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಬೂತ್‌ನಲ್ಲಿ ಬಿ.ಜೆ.ಪಿ ಯಪರವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಈ ಮೂಲಕ ದೇಶದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಹೊಸ ಅಲೆ ಸೃಷ್ಟಿ ಮಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಯಕ್ಕೆ ದಾರಿ ಮಾಡಿಕೊಡಬೇಕಾಗಿದೆ ಎಂದು ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದರು.
ಸಾಲಿಗ್ರಾಮದಲ್ಲಿ ಭಾನುವಾರ ಸಂಜೆ ಬಿಜೆಪಿಯ ಹಿರಿಯ ಮುಖಂಡ ಶಿವರಾಮ ಉಡುಪ ಅವರ ಮನೆಯಲ್ಲಿ ಆಯೋಜಿಸಲಾದ ಸಾಲಿಗ್ರಾಮ ಸ್ಥಾನೀಯ ಸಮಿತಿ ಮತ್ತು ಕೋಟ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಕಳೆದ ೬೦ ವರ್ಷಗಳಿಂದ ಮಾಡಲಾಗದ ಭಾರತ ನಿರ್ಮಾಣ ಕಾರ್ಯವನ್ನು ಈಗ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದೆ. ಆದರೆ ಬಿಜೆಪಿ ಭಾರತದ ಭದ್ರತೆಯ ವಿಚಾರವನ್ನು ಮುಂದಿಟ್ಟು ಚುನಾವಣೆಗೆ ಸಿದ್ಧವಾಗಿದೆ ಎಂದರು.
ಮಂಗಳೂರಿನಿಂದ ಕುಂದಾಪುರ ಚುತುಷ್ಪಥ ಕಾಮಗಾರಿ ವಿಳಂಬ ವಿರುದ್ಧ, ಅಡಿಕೆ ಬೆಳೆಗಾರ ಸಹಾಯಕ್ಕಾಗಿ, ಕರಾವಳಿಯಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟು ಹಾಕುವುವಂತೆ ಬಿಜೆಪಿ ಪಾದ ಯಾತ್ರೆ ನಡೆಸಿ ಜನಾಂದೋಲನ ಸೃಷ್ಟಿಸಿದೆ ಮತ್ತು ರಾಜ್ಯದ ಬಹುತೇಕ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ.
ಈ ವಿಚಾರಗಳನ್ನು ಮುಂದಿನ ಚುನಾವಣೆಯಲ್ಲಿ ಮತದಾರರಿಗೆ ತಿಳಿಸಿ ಹೇಳಬೇಕಾದ ಜವಾಬ್ದಾರಿ ಪ್ರತಿಯೋರ್ವ ಬಿಜೆಪಿ ಕಾರ್ಯಕರ್ತರ ಮೇಲಿದೆ ಎಂದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್, ಹಿರಿಯರಾದ ರಾಮಕೃಷ್ಣ ಐತಾಳ್, ಶಿವರಾಮ ಉಡುಪ, ಸಾಲಿಗ್ರಾಮ ಸ್ಥಾನೀಯ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ, ಕೋಟ ಶಕ್ತಿ ಕೇಂದ್ರ ಅಧ್ಯಕ್ಷ ವಿಠಲ್ ಪೂಜಾರಿ ಐರೋಡಿ, ಶ್ಯಾಮ ಸುಂದರ ನಾಯರಿ, ಕೆ.ಪಿ.ಶೇಖರ, ಸುಬ್ರಾಯ ಉರಾಳ, ಸಂದೀಪ ಕುಂದರ್ ಕೋಡಿ ಇದ್ದರು. ಸ್ಥಾನೀಯ ಸಮಿತಿಯ ಕಾರ್ಯದರ್ಶಿ ಮಂಜುನಾಥ ನಾಯರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.