ADVERTISEMENT

`ಜನಪ್ರತಿನಿಧಿ ಕ್ರಿಯಾಶೀಲನಾದರೆ ಪ್ರಗತಿ'

ಹೇರೂರು: ವಿವಿಧ ಕಾಮಗಾರಿ ಉದ್ಘಾಟನೆ, ಗುದ್ದಲಿಪೂಜೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:14 IST
Last Updated 19 ಡಿಸೆಂಬರ್ 2012, 11:14 IST

ಹೇರೂರು (ಬೈಂದೂರು): ಜನಪ್ರತಿನಿಧಿ ಕ್ರಿಯಾಶೀಲರಾದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇದಕ್ಕೆ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ವರ್ಷಾವಧಿಯಲ್ಲಿ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳೇಸಾಕ್ಷಿ. ಇದಕ್ಕೆ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ಕ್ರಿಯಾಶಾಲಿತ್ವ ಕಾರಣ ಎಂದು ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು.

ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕೆಲವು ಕಾಮಗಾರಿಗಳನ್ನು ಮಂಗಳವಾರ ಉದ್ಘಾಟಿಸಿ, ಹೊಸ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಅವರು ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1 ಕೋಟಿ ರೂಪಾಯಿ ವೆಚ್ಚದಲ್ಲಿ ಹೇರೂರು-ಕಾಲ್ತೋಡು ಗ್ರಾಮಗಳ ನಡುವೆ ನಿರ್ಮಿಸಿದ ಕಿಂಡಿ ಅಣೆಕಟ್ಟನ್ನು ಉದ್ಘಾಟಿಸಿದ ಅವರು  ಹೇರೂರು ಗ್ರಾಮಕ್ಕೆ ಮಂಜೂರಾದ 66.9 ಲಕ್ಷ ಮೊತ್ತದ ಸುವರ್ಣ ಗ್ರಾಮೋದಯ ಯೋಜನೆಗೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿ ಅವರು 30 ಲಕ್ಷ ರೂಪಾಯಿ ವೆಚ್ಚದ ಕೆಳಹೇರೂರು ಕೊರಗರ ಕಾಲೊನಿ ರಸ್ತೆಯನ್ನು ಉದ್ಘಾಟಿಸಿದರು. 50 ಲಕ್ಷ ರೂಪಾಯಿ ವೆಚ್ಚದ ನೀರು ಪೂರೈಕೆ ಯೋಜನೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. 25 ಲಕ್ಷ ರೂಪಾಯಿ ಮೊತ್ತದ ಮುತ್ತಾಬೇರು ಕೆಂಜಿ-ಉಳ್ಳೂರು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ತಾಲ್ಲೂಕು ಪಂಚಾಯಿತಿ ಸದಸ್ಯೆ ರಾಧಾ ಪೂಜಾರಿ ಚಾಲನೆ ನೀಡಿದರು.  

ಕಾರ್ಯನಿರ್ವಹಣಾಧಿಕಾರಿ  ಗೋಪಾಲ ಶೆಟ್ಟಿ, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್. ಸಿ.ಮಹದೇವಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸವಲಿಂಗನ ಗೌಡ, ಉದ್ಯಮಿ ಟಿ. ಲಕ್ಷ್ಮಣ ಹೆಗ್ಡೆ, ಮಾಜಿ ಮಂಡಳ ಉಪ ಪ್ರಧಾನ ಎಂ. ಶಾಂತಾರಾಮ ಶೆಟ್ಟಿ ಅತಿಥಿಗಳಾಗಿದ್ದರು. ಗ್ರಾ.ಪಂ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ತಮ್ಮ ಅವಧಿಯಲ್ಲಿ ಅನುಷ್ಠಾನಗೊಂಡ 7 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ವಿವರ ನೀಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಶಾಸಕರನ್ನು ಗ್ರಾ.ಪಂ.  ಪರವಾಗಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.