ADVERTISEMENT

ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಚಾಲನೆ

ಗುಣಮಟ್ಟದ ಆಹಾರ ಪೂರೈಕೆ ಗುರಿ: ಸಚಿವ ಪ್ರಮೋದ್‌ ಮಧ್ವರಾಜ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 6:29 IST
Last Updated 26 ಮಾರ್ಚ್ 2018, 6:29 IST
ಸಾರ್ವಜನಿಕರಿಗೆ ಊಟ– ಉಪಹಾರ ಒದಗಿಸುವ ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.     ಪ್ರಜಾವಾಣಿ ಚಿತ್ರ
ಸಾರ್ವಜನಿಕರಿಗೆ ಊಟ– ಉಪಹಾರ ಒದಗಿಸುವ ಸವಿರುಚಿ ಸಂಚಾರಿ ಕ್ಯಾಂಟೀನ್‌ಗೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಉದ್ಯೋಗ ನೀಡುವ ಹಾಗೂ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಊಟ– ಉಪಹಾರ ಒದಗಿಸುವ ಸವಿರುಚಿ ಸಂಚಾರ ಕ್ಯಾಂಟೀನ್‌ಗೆ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಚಾಲನೆ ನೀಡಿದರು.

ಆ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಸವಿರುಚಿ ಕ್ಯಾಂಟೀನ್ ಸಹ ಒಂದು. ₹10 ಲಕ್ಷ ಬಡ್ಡಿ ರಹಿತ ಸಾಲವನ್ನು ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ನೀಡಲಾಗುತ್ತದೆ. ಅದರಲ್ಲಿ ಅವರು ವಾಹನ ಹಾಗೂ ಇತರ ಪರಿಕರ ಖರೀದಿಸಿ ಸಂಚಾರಿ ಕ್ಯಾಂಟೀನ್ ಆರಂಭಿಸಬಹುದು. ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಇದರಿಂದ ಉದ್ಯೋಗ ಸಿಗುತ್ತದೆ. ಅಲ್ಲದೆ ಕಡಿಮೆ ಬೆಲೆಗೆ ರುಚಿಕರ ಹಾಗೂ ಗುಣಮಟ್ಟದ ಆಹಾರ ಜನರಿಗೆ ಲಭ್ಯವಾಗುತ್ತದೆ ಎಂದು ಅವರು ಹೇಳಿದರು.

ಕ್ಯಾಂಟೀನ್ ನಿರ್ವಹಣೆ ಮಾಡುವ ತಂಡದ ಮುಖ್ಯಸ್ಥೆ ಧನಲಕ್ಷ್ಮೀ ಅವರು ಮಾತನಾಡಿ, ಒಟ್ಟು 9 ಮಂದಿ ಸದಸ್ಯರು ಕ್ಯಾಂಟೀನ್ ನಿರ್ವಹಣೆ ಮಾಡುತ್ತೇವೆ. ನಗರದ ಬಾಲಭವನ ಆವರಣದಲ್ಲಿ ಆಹಾರ ತಯಾರಿಸಲಾಗುವುದು. ಅನು ಕೂಲಕ್ಕೆ ತಕ್ಕಂತ ಮನೆಯಲ್ಲಿಯೂ ಊಟ– ತಿಂಡಿ ತಯಾರಿಸಿ ತರಲಾಗು ವುದು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ಸಂಜೆ ತಿಂಡಿ ಲಭ್ಯವಾಗಲಿದೆ. ಊಟಕ್ಕೆ ₹25 ನಿಗದಿ ಮಾಡುವ ಯೋಚನೆ ಇದೆ. ತಿಂಡಿಗಳಿಗೆ ಬೇರೆ ಬೇರೆ ದರ ವಿಧಿಸಲಾಗುವುದು ಎಂದರು.

ADVERTISEMENT

ಸಸ್ಯಹಾರ ಮಾತ್ರವಲ್ಲದೆ ಮಾಂಸಾಹಾರವನ್ನು ಮಾಡುವ ಯೋಚನೆ ಇದೆ. ಮುಖ್ಯವಾಗಿ ಚಿಕನ್ ಖಾದ್ಯಗಳನ್ನು ಮಾಡಲಾಗುತ್ತದೆ. ಇದರಿಂದ ಎಲ್ಲ ರೀತಿಯ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಉಡುಪಿ ಉಪ ವಿಭಾಗದಲ್ಲಿ ಸಂಚರಿಸಲು ಅನುಮತಿ ಸಿಕ್ಕಿದೆ. ಉಡುಪಿ, ಬ್ರಹ್ಮಾವರ ಮುಂತಾದ ಭಾಗಗಳಲ್ಲಿ ಕ್ಯಾಂಟೀನ್ ಸಂಚರಿಸಲಿದೆ. ಬೇಡಿಕೆಗೆ ತಕ್ಕಂತೆ ಆಹಾರ ತಯಾರಿಸಲಾಗುವುದು ಎಂದು ಹೇಳಿದರು.

ಸಂಚಾರಿ ಕ್ಯಾಂಟೀನ್‌ಗಾಗಿ ಲಘು ಸರಕು ಸಾಗಣೆ ವಾಹವನ್ನು ವಿನ್ಯಾಸ ಮಾಡಲಾಗಿದೆ. ಒಳಗೆ ಸಿಲಿಂಡರ್, ಸ್ಟೌ ಹಾಗೂ ಆಹಾರ ಪದಾರ್ಥ ಇಡಲು ವ್ಯವಸ್ಥೆ ಇದೆ. ಕ್ಯಾನೋಪಿ ಸಹ ಇದ್ದು, ವಾಹನ ಸಂಚರಿಸುವಾಗ ಅದನ್ನು ಮಡಿಸಬಹುದಾಗಿದೆ. ಮೊದಲ ಸಂಚಾರಿ ಕ್ಯಾಂಟೀನ್ ಇದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ಬಡ್ಡಿ ರಹಿತ ಸಾಲ ನೀಡಲಾಗಿದ್ದು, ಕ್ಯಾಂಟೀನ್ ಆರಂಭವಾದ ಆರು ತಿಂಗಳ ನಂತರ ಕಂತು ಆರಂಭವಾಗಲಿದೆ. ಆದ್ದರಿಂದ ಸ್ತ್ರೀ ಶಕ್ತಿ ಸಂಘಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.