ADVERTISEMENT

ತಾಲ್ಲೂಕು ಸಮ್ಮೇಳನ: ಬೈಂದೂರು ತಾಲ್ಲೂಕು ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:12 IST
Last Updated 19 ಡಿಸೆಂಬರ್ 2012, 11:12 IST

ಬೈಂದೂರು: ಇಲ್ಲಿನ ರಾಜರಾಜೇಶ್ವರಿ ಕಲಾಮಂದಿರದ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್. ಪುಂಡಲೀಕ ಹಾಲಂಬಿ ಅವರೇ ಮೂರು ನಿರ್ಣಯಗಳನ್ನು ಮಂಡಿಸಿದರು.

ಕುಂದಾಪುರ ತಾಲ್ಲೂಕಿನ ಹಾಲಾಡಿಯವರಾದ ಅವರು ಬೈಂದೂರು ಪರಿಸರದಲ್ಲಿ ಕಳೆದ ತಮ್ಮ ಬಾಲ್ಯ, ಸಾಹಿತ್ಯ ಪರಿಷತ್ತಿನೊಂದಿಗಿನ 13 ವರ್ಷಗಳ ಸಾಂಗತ್ಯ, ಅದರ ಔನ್ನತ್ಯ ಸಾಧನೆಗಾಗಿ ವಹಿಸಿದ ಶ್ರಮ ಮತ್ತು ಅದರ ಫಲವಾಗಿ ಕಸಾಪ ಅಧ್ಯಕ್ಷ ಪದವಿಗೇರಿದ್ದನ್ನು ಸ್ಮರಿಸಿದರು. ಹುಟ್ಟೂರಿನ ಋಣ ತೀರಿಸಬೇಕಾದ ಹೊಣೆಯಿಂದಾಗಿ ಸ್ವತಃ ನಿರ್ಣಯ ಮಂಡಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.
 
`ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಬೈಂದೂರು ತಾಲ್ಲೂಕು ರಚನೆ ಶೀಘ್ರವೇ ಆಗಬೇಕು,  ಮೊಗೇರಿ ಪರಿಸರದಲ್ಲಿ ಗೊಪಾಲಕೃಷ್ಣ ಅಡಿಗರ ಸ್ಮಾರಕ ನಿರ್ಮಾಣವಾಗಬೇಕು ಮತ್ತು ಕರಾವಳಿಯ ವಿಶಿಷ್ಟ ಅಚ್ಚಕನ್ನಡ ಭಾಷಾ ವೈವಿಧ್ಯವಾದ `ಕುಂದಾಪ್ರ ಕನ್ನಡ'ಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯಾಗಬೇಕು' ಎಂಬ ಕರಡು ನಿರ್ಣಯಗಳನ್ನು  ಸಮ್ಮೇಳನಾಧ್ಯಕ್ಷ ಯು. ಚಂದ್ರಶೇಖರ ಹೊಳ್ಳ, ಹೋಬಳಿ ಪರಿಷತ್ತಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮತ್ತು ಜಿಲ್ಲಾ ಪರಿಷತ್ತಿನ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಅನುಮೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.