ADVERTISEMENT

ಪಠ್ಯಕ್ರಮ ಅಳವಡಿಸಿದಲ್ಲಿ ಯಕ್ಷಗಾನ ಉಳಿವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:30 IST
Last Updated 9 ಏಪ್ರಿಲ್ 2012, 9:30 IST

ಬ್ರಹ್ಮಾವರ: ರಾಜ್ಯ ಸರ್ಕಾರ ಯಕ್ಷಗಾನ ವನ್ನು ಶಾಲಾ ಕಾಲೇಜುಗಳಿಗೆ ಪಠ್ಯಕ್ರಮವ ನ್ನಾಗಿ ಜಾರಿಗೆ ತಂದಲ್ಲಿ ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶನಿವಾರ ಅಜಪುರ ಯಕ್ಷಗಾನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಕ್ಷಗಾನಕ್ಕೆ ಅದರದೇ ಆದ ತಾಂತ್ರಿಕತೆಯ ರೀತಿ ನೀತಿಗಳಿವೆ. ಆದರೆ ಇಂದು ಯಕ್ಷಗಾನವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುತ್ತಿರುವ ಕಾರಣ ಯಕ್ಷಗಾನ ಸೊರಗುತ್ತಿದೆ ಎಂದು ಅವರು ಹೇಳಿದರು.

ಬಡಗುತಿಟ್ಟು ಯಕ್ಷಗಾನಕ್ಕೆ ಬ್ರಹ್ಮಾವರ ಕೇಂದ್ರ ಸ್ಥಾನ. ಹಲವು  ಕಲಾವಿದರನ್ನು ಬ್ರಹ್ಮಾವರ ನೀಡಿದೆ. ಅಜಪುರ ಯಕ್ಷಗಾನ ಸಂಘದಿಂದ ಮುಂದೆ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಕಲಾವಿದರು ಬಂದು ಯಕ್ಷಗಾನ ತನ್ನ ಕಂಪನ್ನು ಎಲ್ಲಾ ಕಡೆ ಪಸರಿಸುವುದು ಎಂದರು.

ಇದಕ್ಕೂ ಮುನ್ನ ಹಿರಿಯ ಯಕ್ಷಗಾನ ವಿದ್ವಾಂಸ ಹಂದಾಡಿ ಸುಬ್ಬಣ್ಣ ಭಟ್ ಉದ್ಘಾಟಿಸಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಪ್ರಮೋದ್ ಮಧ್ವರಾಜ್, ಚಂದ್ರಶೇಖರ್ ಕೆದ್ಲಾಯ, ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಕೃಷ್ಣಸ್ವಾಮಿ ಜೋಯಿಸ, ಉಪಾಧ್ಯಕ್ಷರಾದ ಬಾಲಕೃಷ್ಣ ಬಿರ್ತಿ, ಎ.ರತ್ನಾಕರ ಭಟ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಮತ್ತು ರಕ್ಷಿತಾ ಬಾಲಗೋಪಾಲ ನೃತ್ಯ ಮಾಡುವುದರ ಮೂಲಕ ಸಂಘಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಬಳಿಕ ಸಂಘದ ಸದಸ್ಯರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಿತು. ಸಂಘ ಆಸಕ್ತ ಮಕ್ಕಳಿಗೆ ಮತ್ತು ಯುವಕರಿಗೆ ಯಕ್ಷಗಾನ ತರಬೇತಿ, ವೇಷಭೂಷಣ ತಯಾರಿ ಹಾಗೂ ಬಳಕೆಯ ತರಬೇತಿ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.