ADVERTISEMENT

ಪಡಿತರ ಚೀಟಿ ಗೊಂದಲ ನಿವಾರಣೆಗೆ ಕ್ರಮ

ಶಾಸಕ ಪ್ರಮೋದ್ ಮಧ್ವರಾಜ್ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 9:25 IST
Last Updated 5 ಜೂನ್ 2013, 9:25 IST

ಉಡುಪಿ: `ಜಿಲ್ಲೆಯಲ್ಲಿ ಪಡಿತರ ಚೀಟಿ ವಿತರಿಸಲು ಆಗುತ್ತಿರುವ ಗೊಂದಲಗಳನ್ನು ಶೀಘ್ರದಲ್ಲಿ ನಿವಾರಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡುರಾವ್ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಜಿಲ್ಲೆಯಲ್ಲಿ ಪಡಿತರ ಚೀಟಿಯ ಗೊಂದಲದ ಬಗ್ಗೆ ಚರ್ಚಿಸಲಾಗಿದ್ದು, ಪಡಿತರ ಚೀಟಿಗೆ ಹೆಸರು ಸೇರಿಸಲು ಮತ್ತು ತೆಗೆಯಲು ಅವಕಾಶ ಇದೆ. ಈ ಬಗ್ಗೆ ಸಾಫ್ಟ್‌ವೇರನ್ನು 10 ದಿನದೊಳಗೆ ವ್ಯವಸ್ಥೆ ಮಾಡಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಸುಲಭವಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೆರಳಚ್ಚು ಮತ್ತು ಭಾವಚಿತ್ರ ತೆಗೆಯಲು ಯಾವುದೇ ಮಿತಿ ಇಲ್ಲದೆ ಪಂಚಾಯಿತಿ ಮತ್ತು ನಗರ ಪ್ರದೇಶದಲ್ಲಿ ಹೊಸ ಬಯೋಮೆಟ್ರಿಕ್ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ, ಆರ್.ಆರ್ ನಂಬ್ರ ಇಲ್ಲದವರಿಗೂ, ಸರ್ಕಾರಿ ಜಾಗದಲ್ಲಿ ಮನೆಕಟ್ಟಿ ವಾಸಿಸುವ ಯಾವುದೇ ಹಕ್ಕುಪತ್ರ, ಆರ್.ಟಿ.ಸಿ ದಾಖಲೆಗಳಿಲ್ಲದ ಬಡವರಿಗೂ ಪಡಿತರ ಚೀಟಿ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿರುವುದಾಗಿ ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವರೊಂದಿಗೆ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಬೈಂದೂರು ಶಾಸಕ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ರದ್ದುಗೊಂಡ ಪಡಿತರ ಚೀಟಿಗಳನ್ನು ಪುನರುಜ್ಜೀವನಗೊಳಿಸಲು ಅವಕಾಶ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯವಿರುವ ಪಡಿತರ ಚೀಟಿದಾರರ ಮನೆ ಸಂಖ್ಯೆ, ವಿದ್ಯುತ್ ಆರ್.ಆರ್ ನಂಬರ್ ಹೊಂದಾಣಿಕೆ ಆಗದೇ ರದ್ದಾಗಿರುವ ಪಡಿತರ ಚೀಟಿಗಳನ್ನು ಪುನರುಜ್ಜೀವನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ರದ್ದಾದ ಪಡಿತರ ಚೀಟಿದಾರರು ಪಡಿತರ ಚೀಟಿ ಜೆರಾಕ್ಸ್ ಪ್ರತಿ, ವಿದ್ಯುತ್ ಬಿಲ್ಲು, ಭಾವಚಿತ್ರ ಇರುವ ಗುರುತು ಚೀಟಿ, ವಿಳಾಸದ ಬಗ್ಗೆ ದಾಖಲೆ ಇವುಗಳನ್ನು ಏಳು ದಿನಗಳೊಳಗೆ ಸಂಬಂಧಿಸಿದ ತಾಲ್ಲೂಕು ಕಚೇರಿಗೆ ಸಲ್ಲಿಸಬೇಕು. ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಬಗ್ಗೆ ಪತ್ರ ನೀಡುವಂತೆ  ಜಿಲ್ಲಾಧಿಕಾರಿ ಡಾ. ಎಂ.ಟಿ.ರೇಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.