ADVERTISEMENT

ಬಿಎಸ್‌ವೈ ಸಂತಸ ಕ್ಷಣಿಕ: ಪೂಜಾರಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 9:25 IST
Last Updated 8 ಮಾರ್ಚ್ 2012, 9:25 IST

ಉಡುಪಿ: `ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿದ್ದ ಎಫ್.ಐ.ಆರ್ ಹೈಕೋರ್ಟ್ ವಜಾ ಗೊಳಿಸಿರುವ ವಿಷಯದಲ್ಲಿ ಬಿಎಸ್‌ವೈಯವರು ಸಂತಸ ಹೆಚ್ಚು ದಿನ ಇರುವುದಿಲ್ಲ~ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇಲ್ಲಿ ಲೇವಡಿ ಮಾಡಿದ್ದಾರೆ.

ಬುಧವಾರ ನಗರದಲ್ಲಿ ಮತಯಾಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಎಸ್‌ವೈ ಸಂತೋಷ ಪಡುವುದು ಏನೂ ಇಲ್ಲ. ಅವರ ಮೇಲೆ ಹಾಗೂ ಅವರ ಕುಟುಂಬಸ್ಥರ ಮೇಲೂ ಅನೇಕ ದೂರುಗಳಿವೆ~ ಎಂದರು.

`ಯಡಿಯೂರಪ್ಪ ಅವರು ಪುನಃ: ಅಧಿಕಾರಕ್ಕೆ ಬರುವ ಕನಸು ಛಿದ್ರವಾಗಲಿದೆ. ಬಿಜೆಪಿ ಹೈಕಮಾಂಡ್‌ಗೆ ಅವರು ಮಾಡುವ ಯಾವುದೇ ಬೆದರಿಕೆ ಫಲಕಾರಿಯಾಗದು. ಈ ಸಣ್ಣ ತೀರ್ಪಿನಿಂದ ರಾಜಕೀಯದಲ್ಲಿ ಯಾವುದೇ ಬದಲಾವಣೆ ಕೂಡ ಆಗುವುದಿಲ್ಲ. ಆದರೆ ಸದಾನಂದ ಗೌಡರ ಮುಖದಲ್ಲಿನ ನಗು ಸ್ವಲ್ಪ ಕಡಿಮೆಯಾಗಬಹುದು~ ಎಂದು ಅವರು ವ್ಯಂಗ್ಯವಾಡಿದರು.

ಹೀನಾಯ ಸೋಲು ಅಲ್ಲ:`ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾ ವಣೆ ಫಲಿತಾಂಶದಂತೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ ಹೀನಾಯ ಸೋಲಂತೂ ಅಲ್ಲ. ಪಂಚರಾಜ್ಯದ ಫಲಿತಾಂಶ ಮಣಿಪುರ ಹೊರತು ಪಡಿಸಿ ಬೇರೆ ಎಲ್ಲಿಯೂ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಲಭಿಸಿಲ್ಲ.
 
ಆದರೂ ಉತ್ತರಾ ಖಂಡದಲ್ಲಿ  ಕಾಂಗ್ರೆಸ್‌ಗೆ ಬಹುಮತವಿದೆ. ಉತ್ತರ ಪ್ರದೇಶ ದಲ್ಲಿ 22 ಸ್ಥಾನಗಳನ್ನು ಪಕ್ಷವು 37ಕ್ಕೆ ಏರಿಸಿ ಕೊಂಡಿದೆ~ ಎಂದು ಸಮರ್ಥಿಸಿ ಕೊಂಡರು. ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್ ಇದ್ದರು.

`ರಾಜಕೀಯ ಕುಲಗೆಡಿಸಿದ್ದು ಕಾಂಗ್ರೆಸ್, ಬಿಜೆಪಿ~
ಉಡುಪಿ:
`ಜಿಲ್ಲೆಯು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸದೇ ಇರಲು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಆಳ್ವಿಕೆಯೇ ಕಾರಣ. ಇತ್ತೀಚೆಗೆ ಪ್ರಾಬಲ್ಯ ಮೆರೆದ ಬಿಜೆಪಿ ಅಭಿವೃದ್ಧಿ ಚಟುವಟಿಕೆಯನ್ನು ನಿರ್ನಾಮ ಮಾಡಿದೆ~ ಎಂದು ಜೆಡಿಎಸ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಟೀಕಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬೋಜೇಗೌಡರ ಪರ ಕಾಪುವಿನಲ್ಲಿ ಇತ್ತೀಚೆಗೆ ಮತಯಾಚಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

`ಚುನಾವಣೆ ಬಂದಾಗ ಹಿಂದುಗಳ ಬಗ್ಗೆ, ಉತ್ಸವಗಳ ಬಗ್ಗೆ, ಧಾರ್ಮಿಕತೆ ಬಗ್ಗೆ ಮಾತನಾಡುವ ಬಿಜೆಪಿಗೂ, ಅಲ್ಪಸಂಖ್ಯಾತರನ್ನು ಇಂದಿಗೂ ಮತಬ್ಯಾಂಕ್‌ಗಳು ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್‌ಗೂ  ವ್ಯತ್ಯಾಸವಿಲ್ಲ. ಭ್ರಷ್ಟಾಚಾರದಲ್ಲಿ  ಎರಡೂ ಪಕ್ಷಗಳು ಒಂದನ್ನೊಂದು ಮೀರಿಸುತ್ತವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.