ADVERTISEMENT

ಬಿ.ಸಿ.ರೋಡ್: ಪಹಣಿ ವಿತರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 11:15 IST
Last Updated 18 ಏಪ್ರಿಲ್ 2011, 11:15 IST

ಬಂಟ್ವಾಳ: ತಾಲ್ಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡ್ ತಾಲ್ಲೂಕು ಕಚೇರಿಯಲ್ಲಿ ಒಂದು ವಾರದಿಂದ ಪಹಣಿಪತ್ರ ವಿತರಣೆ ಸ್ಥಗಿತಗೊಂಡಿದ್ದು, ಇಲ್ಲಿನ ನೆಮ್ಮದಿ ಕೇಂದ್ರದಲ್ಲಿ ನಾಗರಿಕರ ‘ನೆಮ್ಮದಿ’ ಕೆಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಾತ್ರ ಸಿಗುತ್ತಿದ್ದ ರೈತರ ಜಮೀನಿನ ಪಹಣಿಪತ್ರ (ಆರ್‌ಟಿಸಿ), ಕ್ರಮೇಣ ಬಂಟ್ವಾಳ ಬೈಪಾಸ್, ಮೆಲ್ಕಾರ್ ಮತ್ತು ವಿಟ್ಲ ನೆಮ್ಮದಿ ಕೇಂದ್ರಗಳ ಮೂಲಕ ದೊರೆಯುತ್ತಿತ್ತು.

ಇದೀಗ ಮೆಲ್ಕಾರ್ ಕೇಂದ್ರವನ್ನು ಬಿ.ಸಿ.ರೋಡ್‌ನ ಖಾಸಗಿ ವಾಣಿಜ್ಯ ಸಂಕೀರ್ಣದ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿದ್ದು, ಇಲ್ಲಿ ನಿಲ್ಲಲು ಸರಿಯಾಗಿ ಸ್ಥಳಾವಕಾಶವೂ ಇಲ್ಲ, ನಾಮಫಲಕವೂ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ‘ಇಲ್ಲಿರುವುದು ಒಂದೇ ಕಂಪ್ಯೂಟರ್. ಅದೂ ಕೈಕೊಟ್ಟರೆ ದೇವರೇ ಗತಿ! ಇನ್ನೊಂದೆಡೆ ತಾಲ್ಲೂಕು ಕಚೇರಿಯಲ್ಲಿ ಒಂದು ವಾರದಿಂದ ಪಹಣಿ ವಿತರಿಸುತ್ತಿಲ್ಲ. ಪಹಣಿ ವಿತರಣೆಗೆ ಬೇಕಾದ ಪರಿಕರಗಳು ಬೆಂಗಳೂರಿನಿಂದ ಬಂದಿಲ್ಲ ಎಂಬ ನೆಪವೊಡ್ಡಿ ಸಾರ್ವಜನಿಕರನ್ನು ಅಧಿಕಾರಿಗಳು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಕೆಲವೊಮ್ಮೆ ಕಂಪ್ಯೂಟರ್ ಕೆಟ್ಟಿದೆ, ದುರಸ್ತಿಯಲ್ಲಿದೆ ಎಂಬ ಫಲಕವೂ ಅಲ್ಲಿ ಕಾಣಿಸಿಕೊಳ್ಳುತ್ತಿದೆ’ ಎಂಬ ಆರೋಪ ನಾಗರಿಕರದ್ದು.

ಶೈಕ್ಷಣಿಕ ಪ್ರವೇಶಾತಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಜಾತಿ, ಆದಾಯ ಮತ್ತು ವಾಸ್ತವ್ಯ ದೃಡೀಕರಣ ಪತ್ರಕ್ಕಾಗಿ ಧಾವಿಸುತ್ತಿದ್ದಾರೆ. ಈ ನಡುವೆ ಸಂಧ್ಯಾ ಸುರಕ್ಷೆ ಮತ್ತಿತರ ಮಾಶಾಸನಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರು, ವಯೋವೃದ್ಧರ ಪಾಡಂತೂ ಹೇಳತೀರದು.

ಇದೀಗ ಮೆಲ್ಕಾರ್‌ನಿಂದ ಬಿ.ಸಿ.ರೋಡ್‌ಗೆ ಸ್ಥಳಾಂತರಗೊಂಡಿರುವ ನೆಮ್ಮದಿ ಕೇಂದ್ರವು ವಾಣಿಜ್ಯ ಸಂಕೀರ್ಣವೊಂದರ ತಳ ಅಂತಸ್ತಿನ ಕಿರಿದಾದ ಕಟ್ಟಡದಲ್ಲಿದೆ. ಪಕ್ಕದಲ್ಲೇ ಇರುವ ಜೆರಾಕ್ಸ್ ಮತ್ತು ಮದ್ಯದಂಗಡಿ (ವೈನ್‌ಶಾಪ್) ಇದ್ದು, ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ‘ಜನಪ್ರತಿನಿಧಿ’ಗಳಂತೂ ಇದ್ದೂ ಇಲ್ಲದವರಾಗಿದ್ದಾರೆ ಎಂಬ ಅಭಿಪ್ರಾಯ ಸ್ಥಳೀಯರದ್ದು
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.