ADVERTISEMENT

ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:00 IST
Last Updated 19 ಸೆಪ್ಟೆಂಬರ್ 2011, 8:00 IST

 ಉಡುಪಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅಗತ್ಯವಿರುವ ಪೆಟ್ರೋಲ್, ಗ್ಯಾಸ್ ದರವನ್ನು ಪದೇ ಪದೇ ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವುದನ್ನು ವಿರೋಧಿಸಿ  ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆಮ್ನಿ ಕಾರೊಂದನ್ನು ಕೈಗಾಡಿಗೆ ಕಟ್ಟಿ ಎಳೆದುಕೊಂಡು ನಗರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕೆಲವರು ಸೈಕಲ್ ತುಳಿಯುತ್ತ ಈ ರ‌್ಯಾಲಿಯಲ್ಲಿ ಪಾಲ್ಗೊಂಡರು.

ಡಯಾನಾ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಕೆ.ಎಂ.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಮೂಲಕ ಸಾಗಿ ಕ್ಲಾಕ್ ಟವರ್ ತಲುಪಿತು. ಅಲ್ಲಿ ವಿನೂತನ ಪ್ರತಿಭಟನಾ ರ‌್ಯಾಲಿ ನಡೆಯಿತು.

ಪೆಟ್ರೋಲಿಯಂ ಬೆಲೆಯನ್ನು ಕೇಂದ್ರ ಸರ್ಕಾರ ಪದೇ ಪದೇ ಹೆಚ್ಚಿಸುತ್ತಿದೆ.  ಅಲ್ಲದೆ ದಿನಬಳಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಅನ್ನು ವಾರ್ಷಿಕ ನಾಲ್ಕಕ್ಕೆ ಇಳಿಸಲಾಗುವುದೆಂದು ಉಭಯ ಸರ್ಕಾರಗಳು ಹೇಳುತ್ತಿರುವುದು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ದೂರಿದರು.

ಪದೇ ಪದೇ ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಬದುಕಿಗೆ ಬಹಳ ಹೊರೆಯಾಗುತ್ತಿದೆ. ಹಾಗೆಯೇ ಸರ್ಕಾರ ಘೋಷಿಸಿರುವಂತೆ ವರ್ಷಕ್ಕೆ ನಾಲ್ಕು ಸಿಲಿಂಡರ್ ಬಹಳ ಕಡಿಮೆಯಾಗುತ್ತಿದ್ದು ಕನಿಷ್ಟ 10 ಸಿಲಿಂಡರ್‌ಗಳನ್ನು ಪೂರೈಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.