ADVERTISEMENT

ಬ್ಯಾಂಕ್‌ನೌಕರರ ಒಕ್ಕೂಟ ಪ್ರತಿಭಟನೆ

ಬ್ಯಾಂಕಿಂಗ್ ತಿದ್ದುಪಡಿ ಮಸೂದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:26 IST
Last Updated 22 ಡಿಸೆಂಬರ್ 2012, 10:26 IST

ಉಡುಪಿ: ಬ್ಯಾಂಕಿಂಗ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ಸದಸ್ಯರು ಉಡುಪಿಯ ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬ್ಯಾಂಕಿಂಗ್ ಕಾಯ್ದೆಯ ತಿದ್ದುಪಡಿಗೆ ಮುಂದಾಗಿರುವ ಪಿ.ಚಿದಂಬಂರಂ ಅವರಿಗೆ ದೇಶದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಚಿದಂಬರಂ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿಂಗ್ ಕ್ಷೇತ್ರದ ತಿದ್ದುಪಡಿ ಮಸೂದೆ ಜಾರಿಯಾದರೆ ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಬ್ಯಾಂಕ್‌ಗಳ ವಿಲೀನದಿಂದ ದುಷ್ಪರಿಣಾಮ ಆಗಿರುವುದನ್ನು ನಾವು ಹಲವು ದೇಶಗಳಲ್ಲಿ ನೋಡಬಹುದು. ಇಲ್ಲಿ ಸಹ ಬ್ಯಾಂಕ್‌ಗಳನ್ನು ವಿಲೀನ ಮಾಡಿದರೆ ಅದು ಕೆಟ್ಟ ಪರಿಣಾಮ ಬೀರಲಿದೆ. ಬ್ಯಾಂಕ್‌ಗಳ ವಿಲೀನದಿಂದ ಗುಣಮಟ್ಟದ ಸೇವೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಬ್ಯಾಂಕ್‌ಗಳನ್ನು ವಿಲೀನ ಗೊಳಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದೊಡ್ಡ ಉದ್ದಿಮೆದಾರರಿಗೆ ಬ್ಯಾಂಕ್ ಆರಂಭಿಸಲು ಪರವಾನಗಿ ನೀಡುವ ಪ್ರಸ್ತಾವಕ್ಕೆ ವಿರೋಧ ಇದೆ. ಉದ್ಯಮಿ ಗಳಿಗೆ ಬ್ಯಾಂಕ್‌ಗಳನ್ನು ಆರಂಭಿಸಲು ಪರವಾನಗಿ ನೀಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ತಿದ್ದುಪಡಿ ಮಸೂದೆ ವಿರೋಧಿಸಿ ದೇಶದಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಒಕ್ಕೂಟದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬ್ಯಾಂಕ್ ನೌಕರರು, ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಷ್ಕರ ಇದ್ದರೂ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಉಡುಪಿ ನಗರದ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ವಹಿವಾಟಿಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.