ADVERTISEMENT

ಬ್ರಹ್ಮಾವರ: ಕೃಷಿ ಮೇಳ 16ರಿಂದ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:35 IST
Last Updated 13 ಅಕ್ಟೋಬರ್ 2011, 5:35 IST

ಉಡುಪಿ: ಬ್ರಹ್ಮಾವರದ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಇದೇ 16 ಮತ್ತು 17ರಂದು `ಕೃಷಿ ಮೇಳ-2011~ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ  ಮಾಹಿತಿ ನೀಡಿದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಹನುಮಂತಪ್ಪ, `ಈ ಕೃಷಿಮೇಳದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ರೀತಿಯ ಕೃಷಿ ವಸ್ತು ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ. 6 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ~ ಎಂದರು.

`ನೂತನ ಕೃಷಿ ತಂತ್ರಜ್ಞಾನಗಳನ್ನು ತಿಳಿಯುವುದು, ಚರ್ಚಾಗೋಷ್ಠಿಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸುವುದು, ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆ ಪ್ರಾತ್ಯಕ್ಷಿಕೆ ವೀಕ್ಷಿಸಿ, ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು, ಅನ್ನದಾತನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆ ಕಲ್ಪಿಸುವುದೇ ಈ ಮೇಳದ ಉದ್ದೇಶ~ ಎಂದರು.

`ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ 16ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಮೇಳ ಉದ್ಘಾಟಿಸುವರು. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಕೆ.ನಾರಾಯಣ ಗೌಡ ಅಧ್ಯಕ್ಷತೆ ವಹಿಸುವರು. ಶಾಸಕ ರಘುಪತಿ ಭಟ್ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸುವರು. ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮಾದರಿ ಆಡು ಸಾಕಣೆ ಘಟಕವನ್ನು ಶಾಸಕ ಗೋಪಾಲ ಭಂಡಾರಿ ಉದ್ಘಾಟಿಸುವರು~ ಎಂದರು.

ರೈತರೊಂದಿಗೆ ಮುಖಾಮುಖಿ: `ಮೊದಲ ದಿನ ಲಾಭದಾಯಕ ಕೋಕೋ ಕೃಷಿ ಮತ್ತು ತೋಟಗಾರಿಕಾ ಬೆಳೆ ಕುರಿತು ಮತ್ತು ಎರಡನೇ ದಿನ ಗೇರುಬೆಳೆ ಮತ್ತುಮಿಶ್ರ ಬೆಳೆ ಪದ್ಧತಿ ಹಾಗೂ ಭತ್ತ ಆಧಾರಿತ ಸಮಗ್ರ ಕೃಷಿ ಪದ್ಧತಿಗಳು ಮತ್ತು ಯಾಂತ್ರೀಕರಣಕ್ಕೆ ಅವಕಾಶಗಳ ಕುರಿತು ಎನ್ನುವ ವಿಚಾರಸಂಕಿರಣ ಏರ್ಪಡಿಸಲಾಗಿದೆ.

ಹಿರಿಯ ಕೃಷಿ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದು, ಇವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಪ್ರಗತಿಪರ ರೈತರು ಅನುಭವ ಹಂಚಿಕೊಳ್ಳಬಹುದು~ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ, ಹಿರಿಯ ಕ್ಷೇತ್ರ ಅಧೀಕ್ಷಕ ಕೆ.ಎಸ್.ಕಾಮತ್, ಸಹಾಯಕ ಕೃಷಿ ಪ್ರಾಧ್ಯಾಪಕ ಡಾ.ಎಸ್.ಯು.ಪಾಟೀಲ್ ಹಾಗೂ ವಾರ್ತಾಧಿಕಾರಿ ಜುಂಜಣ್ಣ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.