ADVERTISEMENT

ಮತದಾನದ ಪ್ರಮಾಣ ಹೆಚ್ಚಿಸುವವರಿಗೆ ಬಹುಮಾನ

ಜಿಲ್ಲೆಯ ಬಿಎಲ್‌ಒಗಳ ಜತೆ ಡಿಸಿ ಆಡಿಯೊ ಕಾನ್ಫರೆನ್ಸ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:38 IST
Last Updated 5 ಏಪ್ರಿಲ್ 2013, 9:38 IST

ಮಂಗಳೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಎರಡು ಕಡೆ ಇರುವ ಹೆಸರು ತೆಗೆಸುವುದು, ಮತದಾರರ ಚೀಟಿ ಹಂಚುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಗುರುವಾರ ಎಲ್ಲ ಬೂತು ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಜತೆಗೆ ಆಡಿಯೊ ಕಾನ್ಫರೆನ್ಸ್ ನಡೆಸಿದರು.

ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿಯ ತಹಶೀಲ್ದಾರ್ ಮೂಲಕ ವಾಕಿಟಾಕಿ ಬಳಸಿ ಮತದಾರರ ಪಟ್ಟಿ ಸಮಗ್ರವಾಗಿಡಬೇಕು ಹಾಗೂ ಸ್ವಚ್ಛವಾಗಿಡಬೇಕೆಂಬ ಉದ್ದೇಶ ದೊಂದಿಗೆ ಆಡಿಯೊ ಕಾನ್ಫರೆನ್ಸ್ ನಡೆಸಿದ ಜಿಲ್ಲಾಧಿಕಾರಿ ಅವರು ನೇರವಾಗಿ ಬಿಎಲ್‌ಒಗಳೊಂದಿಗೆ ಸಂವಾದ ನಡೆಸಿದರು.

ವಿಶೇಷ ಮುತುವರ್ಜಿ ವಹಿಸಿ ಮತದಾನದ ಶೇಕಡಾವಾರು ಹೆಚ್ಚಿಸುವ ಕುರಿತು  ಪ್ರಾಮಾಣಿಕ ಪ್ರಯತ್ನ ಮಾಡಿ ಸಾಧನೆ ಮಾಡಿದರೆ ಅವರಿಗೆ ನಗದು ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದರು.

ಫಾರ್ಮ್ ನಂಬರ್ 6 ಮತ್ತು 7 ಬಿಎಲ್‌ಒಗಳ ಬಳಿ ಉಳಿಯಬಾರದು, ಹಾಗೆ ಉಳಿಸಿಕೊಂಡರೆ ಕ್ರಮ ನಿಶ್ಚಿತ. ಪಡೆದುಕೊಂಡಿರುವ ಫಾರ್ಮ್‌ಗಳನ್ನು ತಕ್ಷಣವೇ ಸೆಕ್ಟರ್ ಅಧಿಕಾರಿಗಳಿಗೆ ನೀಡಬೇಕು ಎಂದು ಅವರು ಸೂಚಿಸಿದರು.

ಸ್ವೀಕೃತಿಯಾದ ಫಾರ್ಮ್ ಯಾವುದೇ ಕಾರಣಕ್ಕೂ ಬಾಕಿ ಉಳಿಯಬಾರದು. ಬಿಎಲ್‌ಒಗಳು ತಮ್ಮಲ್ಲಿರುವ ಅರ್ಜಿಗಳನ್ನು ಆರ್‌ಒ ಅಥವಾ ತಹಶೀ ಲ್ದಾರರಿಗೆ ವರ್ಗಾಯಿಸಿ. ಸೆಕ್ಟರ್ ಅಧಿಕಾರಿಗಳು ಮತ್ತು ತಹಶೀಲ್ದಾರರು ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಬೇಕು. ತಪ್ಪುಗಳನ್ನು ಸರಿಪಡಿಸಿ ಕೊಳ್ಳಬೇಕು. ಮತದಾರರ ಪಟ್ಟಿಯನ್ನು ಸ್ವಚ್ಛವಾಗಿಡುವುದಕ್ಕೆ ಆದ್ಯತೆ ನೀಡಬೇಕು ಎಂದರು.

ಅರ್ಜಿ ಸೇರ್ಪಡೆ ನಿರಂತರ ಪ್ರಕ್ರಿಯೆ ಯಾಗಿದ್ದು, ಜನವರಿಯಲ್ಲೇ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದರೂ, `ಸ್ವೀಪ್'ನಂತಹ ವಿಶೇಷ ಕ್ರಮಗಳಿಂದ ಸೇರ್ಪಡೆಯ ಅರ್ಜಿಗಳು ಹೆಚ್ಚಾಗಿವೆ. ಅಂತಿಮ ಹಂತದ ದಟ್ಟಣೆ ದುರುಪ ಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ವಹಿಸಬೇಕು ಎಂದರು.

ಆದರೆ ನಿಜವಾದ ಅರ್ಹರಿಗೆ ಅವಕಾಶ ಒದಗಿಸಲು ಜಿಲ್ಲಾಡಳಿ ಬದ್ದವಾಗಿದೆ ಮತ್ತು ಸಜ್ಜಾಗಿದೆ ಎಂದರು. ಇದಕ್ಕಾಗಿ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಿ ಮತದಾರರಿಗೆ ಮತದಾನದ ಚೀಟಿ ಹಂಚುವಾಗ ಖುದ್ದಾಗಿ ಮತದಾರರನ್ನು ನೋಡಬೇಕು. ಬಹಳ ದಿನಗಳಿಂದ ಮನೆಯಲ್ಲಿ ಇಲ್ಲದೆ ಇರುವ ಮತದಾರರನ್ನು ಗುರುತಿಸಿ ಲಾಂಗ್ ಆಬ್ಸಂಟಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಮೂದಿಸಬೇಕು ಎಂದು ಸಲಹೆ ನೀಡಿದರು.

ಹಾಸ್ಟೆಲ್ ಮಕ್ಕಳ ಸೇರ್ಪಡೆ ಬಗ್ಗೆ, ಅಪೂರ್ಣ ಅರ್ಜಿಗಳ ಬಗ್ಗೆ ಪಾರ್ಟ್- 4 ವಿಷಯ ಅಪೂರ್ಣವಾಗಿದ್ದರೆ ಅದನ್ನು ಸ್ವೀಕರಿಸಬೇಡಿ ಎಂದ ಅವರು, ಎರಡು ಕಡೆ ಹೆಸರಿದ್ದರೆ ಕಠಿಣ ಶಿಕ್ಷೆ ಶತಃಸಿದ್ಧ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಹೆಸರು ಸೇರ್ಪಡೆ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.

ಇದೇ 7 ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಂತಿಮ ದಿನವಾಗಿದ್ದು, ಎಲ್ಲ ಸೆಕ್ಟರ್ ಅಧಿಕಾರಿಗಳು 10 ತಾರೀಖಿನೊಳಗೆ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ. 15ರೊಳಗೆ ಮತದಾರರ ಪಟ್ಟಿ ಸಿದ್ಧಪಡಿಸಿ 17ರಂದು ಮತದಾರರಪಟ್ಟಿಯನ್ನು ಪ್ರಚುರ ಪಡಿಸಲು ಜಿಲ್ಲಾಡಳಿತ ಸಿದ್ಧವಾಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುಂಚೆ ಮಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಮೂಡಬಿದ್ರೆ ಬಿಎಲ್ ಒ ಮತ್ತು ಅಧಿಕಾರಿಗಳೊಂದಿಗೆ ಪುರಭವನದಲ್ಲಿ ನೇರವಾಗಿ ಸಂವಾದ ನಡೆಸಿದರು.

ಬೆಳಿಗ್ಗೆ ಅವರು ಕೂಳೂರಿನ 44 ಮತ್ತು 44 ಎ ವಾರ್ಡುಗಳಿಗೆ ಭೇಟಿ ನೀಡಿ ಮತದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಭಾರತೀ ಎಜುಕೇಶನ್ ಸೆಂಟರ್‌ನಲ್ಲಿ ಅಲ್ಲಿನ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.