ADVERTISEMENT

ಮತಾಂತರದಿಂದ ಹಿಂದೂ ಜನಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 9:17 IST
Last Updated 22 ನವೆಂಬರ್ 2017, 9:17 IST

ಉಡುಪಿ: ‘ಧರ್ಮ ಸಂಸತ್ ಮೂಲಕ ಯುವಕರಿಗೆ ನಮ್ಮ ಧರ್ಮ ಮತ್ತು ಸಂಸ್ಕೃತಿ ಏನು ಎಂದು ತಿಳಿಸಬೇಕು’ ಎಂದು ಮಣಿಪಾಲ ಗ್ಲೋಬಲ್ ಸಂಸ್ಥೆ ಮುಖ್ಯಸ್ಥ ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.

ಧರ್ಮ ಸಂಸತ್‌ ಕಾರ್ಯಾಲ ಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ‘6 ಸಾವಿರ ವರ್ಷಗಳ ಇತಿಹಾಸ ಹಿಂದೂ ಧರ್ಮಕ್ಕೆ ಇದೆ. ಆದರೆ, ಈ ಧರ್ಮವೇ ಇಲ್ಲ, ಅದೊಂದು ಜೀವನ ಪದ್ಧತಿ ಎಂದು ಪಾಶ್ಚಾತ್ಯರು ಅಪಪ್ರಚಾರ ಮಾಡುತ್ತಿದ್ದಾರೆ. ಮುರೂವರೆ ಕೋಟಿ ದೇವರು ಇದ್ದಾರೆ ಎಂದು ಅವರು ಅವಹೇಳನ ಮಾಡುತ್ತಾರೆ. ಇಷ್ಟ ದೇವತೆ ಪರಿಕಲ್ಪನೆಯೇ ಅವರಿಗೇ ಗೊತ್ತಿಲ್ಲ. ಧರ್ಮದ ಬಗ್ಗೆ ನಡೆಯುತ್ತಿರುವ ಅಪ ಪ್ರಚಾರದಿಂದಾಗಿ ನಮ್ಮ ಯುವಕರು ಗೊಂದಲಕ್ಕೀಡಾಗಿದ್ದಾರೆ. ಅವರಿಗೆ ನಮ್ಮ ಧರ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇಲ್ಲದಾಗಿದೆ. ಆದ್ದರಿಂದ ಅವರಿಗೆ ವಾಸ್ತವ ತಿಳಿಸುವ ಕೆಲಸ ಆಗಬೇಕು’ ಎಂದರು.

ಮತಾಂತರದಿಂದಾಗಿ ಹಿಂದೂ ಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಒಟ್ಟು ಜನಸಂಖ್ಯೆಯಲ್ಲಿ ಹಿಂ ದೂಗಳು ಶೇ 85ರಷ್ಟಿದ್ದರು. ಆದರೆ, ಮತಾಂತರದಿಂದಾಗಿ ಅದು ಈಗ ಶೇ 77ಕ್ಕೆ ಇಳಿದಿದೆ. ಪ್ರತಿ ವರ್ಷ ಮತಾಂತರದ ಉದ್ದೇಶಕ್ಕಾಗಿ ₹ 12 ಸಾವಿರ ಕೋಟಿ ವಿದೇಶದಿಂದ ಬರುತ್ತಿದೆ. ಆಮಿಷವೊಡ್ಡಿ, ದೆವ್ವದ ಆರಾಧನೆ (ಡೆವಿಲ್ ವರ್‌ಶಿಪ್‌) ಎಂದು ಧರ್ಮದ ಬಗ್ಗೆ ಅವಹೇಳನ ಮಾಡಿ, ಅಗೌರವ ಮೂಡಿಸಿ ಮತಾಂತರ ಮಾಡ ಲಾಗುತ್ತಿದೆ. ವಾಸ್ತವವಾಗಿ ಭಾರತದಲ್ಲಿ ಇರುವ ಕ್ರೈಸ್ತರ ಸಂಖ್ಯೆ 7.50 ಕೋಟಿ. ಆದರೆ, ದಾಖಲೆಗಳಲ್ಲಿ 3.50 ಕೋಟಿ ಇದೆ ಎಂದು ಹೇಳಿದರು.

ADVERTISEMENT

‘ದೆಹಲಿ ಕಮ್ಯೂನಿಸ್ಟ್ ಮತ್ತು ಎಡಪಂಥೀಯ ಮಾಧ್ಯಮಗಳು ಹಿಂದೂಗಳನ್ನು ಕೋಮುವಾದಿಗಳು ಎಂದು ಬಿಂಬಸುತ್ತಿವೆ. ಯಾವುದೇ ದೇಶದ ಬಹುಸಂಖ್ಯಾತರು ತಾವು ಕ್ರೈಸ್ತರು ಅಥವಾ ಇಂತಹ ಧರ್ಮೀ ಯರು ಎಂದು ಹೇಳಿಕೊಂಡರೆ, ಅವ ರನ್ನು ಕೋಮುವಾದಿಗಳು ಎಂದ ಕರೆಯುವ ಪರಿಪಾಠ ಇಲ್ಲ. ಆದರೆ ನಮ್ಮ ದೇಶದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂಗಳು ಒಂದಾಗಬೇಕು: ‘ಪ್ರಜಾತಂತ್ರ ಎಂಬುದು ಸ್ಪರ್ಧಾತ್ಮಕ ಲಾಬಿಯಂತಾಗಿದೆ. ರಾಜಕೀಯ ಪಕ್ಷ ಗಳು ಜನರನ್ನು ಒಡೆದು ಅಧಿಕಾರಕ್ಕೆ ಬರುತ್ತವೆ. ಸುಮಾರು 45 ವರ್ಷಗಳ ಕಾಲ ಅದೇ ರೀತಿ ಆಗಿದೆ. ನಾವೆಲ್ಲರೂ ಒಂದಾಗಿ ಕೇಳಿದರೆ ಸಿದ್ದರಾಮಯ್ಯ ಸಹ ಏನು ಬೇಕಾದರೂ ಕೊಡುತ್ತಾರೆ. ರಾಜಕಾರಣಿಗಳಿಗೆ ಅಧಿಕಾರ ಬರುವ ಆಸೆ ಮಾತ್ರ ಇರುತ್ತದೆ. ಆದ್ದರಿಂದ ನಾವೆಲ್ಲರೂ ಒಂದಾಗಬೇಕು, ಆರು ಸಾವಿರ ವರ್ಷಗಳ ಇತಿಹಾಸ ಇರುವ ಧರ್ಮವನ್ನು ಮುಂದುವರೆಸಬೇಕು’ ಎಂದು ಹೇಳಿದರು.

‘ಆರ್ಥಿಕ ಬೆಳವಣಿಗೆ ವೇಗವಾಗಿ ಆಗುತ್ತಿದ್ದು, ಸದ್ಯ ₹1.51 ಕೋಟಿ ಇರುವ ಒಟ್ಟು ರಾಷ್ಟ್ರೀಯ ಉತ್ಪನ್ನದ ಮೌಲ್ಯ 2030ರ ವೇಳೆಗೆ ₹6 ಕೋಟಿ ಕೋಟಿಯಾಗಲಿದೆ’ ಎಂದರು. ವಿಎಚ್‌ಪಿ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್, ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಇದ್ದರು.

‘ಧರ್ಮದ ಅಂತಃಸತ್ವ ಅರಿಯಿರಿ’
ಹಿಂದೂ ಧರ್ಮದ ಅಂತಃ ಸತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ದೇಶಕ್ಕೆ ಹೇಗೆ ಒಂದೇ ಸಂವಿಧಾನವೋ ಹಿಂದೂ ಅಧ್ಯಾತ್ಮ ತತ್ವದಲ್ಲಿ ಪರದೈವ ಒಂದೇ. ದೇಶದಲ್ಲಿ ಅಧಿಕಾರಿಗಳು ಇರುವಂತೆ ಇಲ್ಲಿ ಮೂರೂವರೆ ಕೋಟಿ ದೇವತೆಗಳಿದ್ದಾರೆ. ಟೀಕಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

* * 

ವರ್ಣ ಪದ್ಧತಿಯ ಎಲ್ಲ ರೀತಿಯ ಭೇದಭಾವಗಳನ್ನು ನಾವು ಹೋಗಲಾಡಿಸಬೇಕು. ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಮೂಲ ಸೌಕರ್ಯ ಒದಗಿಸಿಕೊಡಬೇಕು.
ಟಿ.ವಿ. ಮೋಹನ್ ದಾಸ್ ಪೈ
ಮಣಿಪಾಲ್ ಗ್ಲೋಬಲ್ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.