ADVERTISEMENT

ಮೀನುಗಾರ ಮಹಿಳೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:05 IST
Last Updated 7 ಜನವರಿ 2012, 9:05 IST

ಕುಂದಾಪುರ: ತಲ್ಲೂರು ಮೀನು ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಮೀನು ಮಾರಾಟಕ್ಕೆ ಮಾಡಲು ಗ್ರಾ.ಪಂ ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘಟನೆಯ ನೇತೃತ್ವದಲ್ಲಿ ಮೀನು ಮಾರಾಟ ನಡೆಸುವ ನೂರಾರು ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

`ಕಳೆದ 20 ವರ್ಷಗಳಿಂದ ಮೀನು ಮಾರಾಟದ ಶುಲ್ಕವನ್ನು ನೀಡಿ ತಲ್ಲೂರು ಮೀನು ಮಾರುಕಟ್ಟೆಯಲ್ಲಿ ನಾವು ಮೀನು ಮಾರಾಟ ನಡೆಸುತ್ತಿದ್ದೇವೆ. ಇತ್ತೀಚೆಗೆ ಇದೆ ಮಾರುಕಟ್ಟೆ ಆವರಣದಲ್ಲಿನ ಅಂಗಡಿಯನ್ನು ಏಲಂನಲ್ಲಿ ಪಡೆದಿರುವ ವಿಜಯ್ ಗುಲ್ವಾಡಿ ಅವರಿಗೆ ಮಾರಾಟಗಾರರ ಆಕ್ಷೇಪಣೆ ನಡುವೆಯೂ ಕೋಳಿ ಹಾಗೂ ಮೀನು ಮಾರಾಟಕ್ಕೆ ಅನುಮತಿ ನೀಡುವ ಮೂಲಕ ಗ್ರಾ.ಪಂ ಬಡ ಮೀನುಗಾರರಿಗೆ ಅನ್ಯಾಯ ಮಾಡಿದೆ~ ಎಂದು ಪ್ರತಿಭಟನಾಕಾರರು ದೂರಿದರು.

ಕುಂದಾಪುರ ಎಸ್.ಐ.ಜಾನ್ಸನ್ ಡಿಸೋಜ, ಗ್ರಾ.ಪಂ ಅಧ್ಯಕ್ಷ ರಘು ಪೂಜಾರಿ, ಪಿಡಿಒ ವಿವೇಕ್ ಕೊಕ್ಕರ್ಣೆ, ರಾಜ್ಯ ದಲಿತ ಸಂಘಟನೆಯ ಮುಖಂಡ ಉದಯ್‌ಕುಮಾರ್ ತಲ್ಲೂರು ಮೊದದವರು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಕುರಿತು ಸಂಘಟನೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಮೀನು ಮಾರಾಟಕ್ಕೆ ಪಡೆದಿರುವ ಅಂಗಡಿ ಪರವಾನಿಗೆ ಅವಧಿ ಮಾರ್ಚ್‌ವರೆಗೂ ಇರುವುದರಿಂದ ಅಲ್ಲಿಯವರೆಗೂ ನದಿ ಮೀನಿನ ಮಾರಾಟಕ್ಕೆ ಮಾತ್ರ ಅನುಮತಿ ನೀಡಿ, ಪರವಾನಿಗೆ ನವೀಕರಣದ ವೇಳೆಯಲ್ಲಿ ಬೇಡಿಕೆ ಪರಿಹರಿಸುವ ಕುರಿತು ತೀರ್ಮಾನಕ್ಕೆ ಬರಲಾಯಿತು.

ಸ್ಥಳೀಯರ ಅಸಮಧಾನ: ಮೀನು ಮಾರಾಟಗಾರ ಸಂಘಟನೆಯ ಬೇಡಿಕೆ ಬಗ್ಗೆ ಸ್ಥಳೀಯರು ವಿಭಿನ್ನ ನಿಲುವು ವ್ಯಕ್ತಪಡಿಸಿದರು. ಇದರಿಂದ ಪ್ರತಿಭಟನಾಕಾರರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.

`ಮಾರುಕಟ್ಟೆಯಲ್ಲಿ ಬೆಳಗಿನ ವೇಳೆ ಕ್ರಮ ಬದ್ದವಾಗಿ ಮೀನು ವ್ಯಾಪಾರ ನಡೆಸದೆ ಇರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಮೀನು ಬೇಕಾದರೆ ಸ್ಥಳೀಯರು ಕುಂದಾಪುರದ ಮಾರುಕಟ್ಟೆಗೆ ಹೋಗಬೇಕಾಗಿದೆ. ಸಂಜೆ ವ್ಯಾಪಾರವಾಗದೆ ಉಳಿದಿರುವ ಮೀನುಗಳನ್ನು ಮಾರುಕಟ್ಟೆಯಲ್ಲಿಯೆ ಬಿಟ್ಟು ಹೋಗುವುದರಿಂದ ಪ್ರಾಣಿಗಳು ಅವುಗಳನ್ನು ಎಳೆದುಕೊಂಡು ಬಂದು ಎಲ್ಲೆಂದರಲ್ಲಿ ಎಸೆಯುವುದರಿಂದ ಊರಿನ ನೈರ್ಮಲ್ಯ ಹಾಳಾಗುತ್ತಿದೆ~ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.

ಪಂಚಾಯಿತಿ ಸ್ವಷ್ಟನೆ: ಮೀನು ಖರೀದಿ ವೇಳೆ ಸಾರ್ವಜನಿಕರಿಗೆ ಆಗುವ ತೊಂದರೆ ಗಳ ಹಿನ್ನೆಲೆಯಲ್ಲಿ ಕಾನೂನು ಹಾಗೂ ಪಂಚಾಯತ್ ರಾಜ್  ತಜ್ಞರ ಅಭಿಪ್ರಾಯ ಪರಿಗಣಿಸಿ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಮೀನು ಮಾರುಕಟ್ಟೆಯಿಂದ ವಾರ್ಷಿಕ ಪಂಚಾಯಿತಿಗೆ ಬರುವ ಆದಾಯಕ್ಕಿಂತ 5 ಪಟ್ಟು ಹೆಚ್ಚು ಆದಾಯ ಈ ಅಂಗಡಿಯೊಂದರಿಂದಲೆ ಬರುತ್ತದೆ. ಮೀನುಗಾರರ ಬೇಡಿಕೆಯನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸುವ ಕುರಿತು ಪಂಚಾಯಿತಿ ಭರವಸೆ ಹೊಂದಿದೆ~ ಎಂದು ಗ್ರಾ.ಪಂ ಪ್ರಮುಖರು `ಪ್ರಜಾವಾಣಿ~ಗೆ ತಿಳಿಸಿದರು.

ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘಟನೆಯ ಅಧ್ಯಕ್ಷೆ ರತ್ನ ಮೊಗವೀರ ಬೀಜಾಡಿ, ಕಾರ್ಯದರ್ಶಿ ಜಿನ್ನಾ ಸಾಹೇಬ್, ಚಿಲ್ಲರೆ ಮೀನು ವ್ಯಾಪಾರಸ್ಥರ ಅಧ್ಯಕ್ಷ ಆರ್ ಮಂಜುನಾಥ ಬಾಳಿಕೆರೆ, ತಾ.ಪಂ ಸದಸ್ಯೆ ಸುಶೀಲ, ಗ್ರಾ.ಪಂ ಕಾರ್ಯದರ್ಶಿ ಮಹೀಮಾ ಶೆಟ್ಟಿ, ಸ್ಥಳೀಯ ರಿಕ್ಷಾ ಸಂಘಟನೆಯ ಶೇಖರ ಪೂಜಾರಿ ಮುಂತಾದವರಿದ್ದರು.

ತಲ್ಲೂರು ಮೀನು ಮಾರುಕಟ್ಟೆಯ ಸಮಸ್ಯೆ ಪರಿಹಾರಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಮೀನುಗಾರ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ತಾಲ್ಲೂಕಿನ ಬಹುತೇಕ ಕಡೆ  ಮೀನು ಮಾರುಕಟ್ಟೆಗೆ ತೆರಳಿದ ಗ್ರಾಹಕರು ಬರಿಗೈಯಲ್ಲಿ ಮರಳಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.