ADVERTISEMENT

ಮುದ್ರಾಡಿ: ರಾಷ್ಟ್ರೀಯ ರಂಗ ಉತ್ಸವ 25ರಿಂದ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 10:05 IST
Last Updated 21 ಫೆಬ್ರುವರಿ 2012, 10:05 IST

ಉಡುಪಿ: ಮುದ್ರಾಡಿಯ `ನಮ ತುಳುವೆರ್ ಕಲಾ ಸಂಘಟನೆ~ ಆಶ್ರಯದಲ್ಲಿ ಇದೇ 25ರಿಂದ ಮಾರ್ಚ್ 4ರವರೆಗೆ ರಾಷ್ಟ್ರೀಯ ರಂಗ ಉತ್ಸವ-2 ಮುದ್ರಾಡಿಯ `ದಿವ್ಯ ಸಾಗರ ಬಯಲು ರಂಗ ಸ್ಥಳ~ದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಕುಮಾರ್ ಮೋಹನ್ ಇಲ್ಲಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಕರ್ಮಿಗಳಿಂದ ರಂಗ ತರಬೇತಿ ಪಡೆದು ರಾಜ್ಯದಾದ್ಯಂತ ಹೆಸರು ಪಡೆದಿರುವ ಮುದ್ರಾಡಿ ನಮ ತುಳುವೆರ್ ಸಂಘಟನೆ ಇದುವರೆಗೆ 145ಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದೆ. 20ನೇ ವರ್ಷದ ಸಂದರ್ಭ 25 ತಂಡಗಳ 25 ನಾಟಕ ಉತ್ಸವವನ್ನು ಆಯೋಜಿಸಿದ್ದು ಸಂಸ್ಥೆಯ ಸಾಧನೆಯಲ್ಲೊಂದು ಮೈಲಿಗಲ್ಲಾಗಿದೆ ಎಂದರು.

ಈ ವರ್ಷ ರಂಗ ಉತ್ಸವವನ್ನು ಆಯೋಜಿಸಿದ್ದು ಒಟ್ಟು 9ದಿನಗಳ ಉತ್ಸವದಲ್ಲಿ ಬೇರೆ ಬೇರೆ ಭಾಷೆಯ ನಾಟಕ ತಂಡಗಳಿಂದ ನಾಟಕ ನಡೆಯಲಿದೆ. ಉತ್ಸವದ ಉದ್ಘಾಟನಾ ಸಮಾರಂಭ ಇದೇ 25ರ ಸಂಜೆ 6.30ಕ್ಕೆ ನಡೆಯಲಿದ್ದು ರಂಗ ನಿರ್ದೇಶಕ ಬಿ.ಸುರೇಶ್ ಉದ್ಘಾಟಿಸಲಿದ್ದಾರೆ. ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಗೋಪಾಲ ಭಂಡಾರಿ, ಡಿ.ಕೆ.ಚೌಟ, ನಾ.ದಾಮೋದರ ಶೆಟ್ಟಿ, ದಿವಾಕರ್ ಎನ್.ಶೆಟ್ಟಿ, ಎಸ್.ಗಣೇಶ್ ರಾವ್ ಪಾಲ್ಗೊಳ್ಳುವರು ಎಂದರು.

ರಂಗ ನಿರ್ದೇಶಕ ಶಿರಸಿಯ ಡಾ. ಶ್ರೀಪಾದ್ ಭಟ್ ಮಾತನಾಡಿ,  ಪರಂಪರೆ ಮತ್ತು ಪ್ರಯೋಗ ಎರಡನ್ನೂ ಹಿನ್ನೆಲೆಯಾಗಿ ಇಟ್ಟುಕೊಂಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಸಮಕಾಲೀನ ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಆಂಧ್ರ ಪ್ರದೇಶದಿಂದ ಬರುವ `ಸುರಭಿ~ ನಾಟಕ ತಂಡದಲ್ಲಿ 60ಕ್ಕೂಹೆಚ್ಚು ಸದಸ್ಯರಿದ್ದು ಅವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು. ಇಷ್ಟು ದೊಡ್ಡ ನಾಟಕ ಕುಟುಂಬ ದೇಶದ ರಂಗಭೂಮಿಯಲ್ಲಿಯೇ ಇಲ್ಲ.  20 ಲಕ್ಷದ ಬಜೆಟ್‌ನಲ್ಲಿ ಈ ನಾಟಕೋತ್ಸವ ಆಯೋಜಿಸಲಾಗಿದೆ ಎಂದರು. 

 ಉದ್ಘಾಟನಾ ಸಮಾರಂಭದ ಬಳಿಕ ಮುಂಬೈ ಕರ್ನಾಟಕ ಸಂಘದ ಡಾ.ಭರತ್ ಕುಮಾರ್ ಪೊಲಿಪು ನಿರ್ದೇಶನದ `ಒರಿ ಮಾಸ್ಟ್ರೆನ ಕಥೆ~ ಎಂಬ ತುಳು ನಾಟಕ ನಡೆಯಲಿದೆ. 26ರಂದು  ಕೃಷ್ಣ ಮೂರ್ತಿ ಕವತ್ತಾರ್ ನಿರ್ದೇಶನದ ಪ್ರಯೋಗ ರಂಗ ಬೆಂಗಳೂರು ನಾಟಕ ತಂಡದ ಶಿವರಾತ್ರಿ ಕನ್ನಡ  ನಾಟಕ, 27ರಂದು ಮುಂಬೈ ಅಭಿನಯ ಮಂಟಪದ ಕರುಣಾಕರ್ ಕಾಪು ನಿರ್ದೇಶನದ `ಕಾರ್ನಿಕದ ಶನೀಶ್ವರೆ~ ತುಳು ನಾಟಕ, 28ರಂದು ಮೈಸೂರು ರಂಗಾಯಣ ತಂಡದಿಂದ `

ಏನ್ ಹುಚ್ಚುರೀ ಯಾಕೇ ಹಿಂಗೆ ಆಡ್ತಿರಿ ( ಕನ್ನಡ)~ , 29ರಂದು ಆಂಧ್ರ ಪ್ರದೇಶದ ಸುರಭಿ ತಂಡದಿಂದ ಪಾತಾಳ ಭೈರವಿ ತೆಲುಗು ನಾಟಕ, ಮಾರ್ಚ್ 1 ರಂದು ಅದೇ ತಂಡದಿಂದ ಇನ್ನೊಂದು ತೆಲುಗು ನಾಟಕ ಮಾಯಾ ಬಜಾರ್, ಮಾರ್ಚ್ 2ರಂದು ಮಣಿಪಾಲ ಸಂಗಮ ಕಲಾವಿದರ ಕರ್ಣಭಾರ (ಕನ್ನಡ), ಮಾರ್ಚ್ 3ರಂದು ಮುದ್ರಾಡಿ ಮಾತೃ ಸಂಸ್ಥೆಯಿಂದ ಪಿಲಿಪತ್ತಿ ಗಡಸ್ ಹಾಗೂ ಮಾರ್ಚ್ 4ರ ಕೊನೆಯ ದಿನದಂದು ಕುದ್ರೋಳಿ ಗಣೇಶ್ ಅವರಿಂದ ರಂಗ ಜಾದೂ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸುಧೀಂದ್ರ ಮೋಹನ್ ಹಾಗೂ ಜತೆ ಕಾರ್ಯದರ್ಶಿ ಉಮೇಶ್ ಕಲ್ಮಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.