ADVERTISEMENT

ಮುಳುಗಡೆ ಭೀತಿಯಲ್ಲಿ ಅಡ್ವೆ ಕೃಷಿ ಭೂಮಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 10:15 IST
Last Updated 8 ಜೂನ್ 2011, 10:15 IST

ಫಲಿಮಾರು (ಪಡುಬಿದ್ರಿ): ಫಲಿಮಾರು ಗ್ರಾ.ಪಂ. ವ್ಯಾಪ್ತಿಯ ಅಡ್ವೆ ತೋಡು ಹೂಳೆತ್ತುವ ಹಾಗೂ ದಂಡೆ ಕಟ್ಟುವ ಕಾಮಗಾರಿ ಮಳೆ ಸುರಿಯುತ್ತಿರುವುದರಿಂದ ಅರ್ಧದಲ್ಲಿ ಸ್ಥಗಿತಗೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ರೂ.37 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಚಾಲನೆ ದೊರೆತದ್ದು, ಮಳೆಗಾಲ ಆರಂಭಗೊಳ್ಳುವ ಕೆಲವೇ ದಿನಗಳ ಮುನ್ನ. ಸ್ವಲ್ಪ ಮಟ್ಟಿಗೆ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದ್ದು, ಕೆಲವು ಕಡೆಗಳಲ್ಲಿ ದಂಡೆ ಕಟ್ಟುವ ಕಾಮಗಾರಿಯೂ ನಡೆಯುತ್ತಿದೆ. ಮಳೆಗಾಲದ ಕೆಲವೇ ದಿನಗಳ ಮೊದಲು ಈ ಕಾಮಗಾರಿ ಆರಂಭಗೊಂಡರೂ ಅತೀ ವೇಗದಲ್ಲಿ ಕಾಮಗಾರಿ ನಡೆದಿದೆ. ಆದರೆ ಇದೀಗ ಮಳೆ ಸುರಿಯಲು ಆರಂಭಗೊಂಡಿರುವುದರಿಂದ ಕಾಮಗಾರಿ ಅರ್ಧದಕ್ಕೇ ಸ್ಥಗಿತಗೊಂಡಿದೆ.

ಕಳೆದ ಕೆಲವು ದಿನಗಳಿಂದ ಮಳೆಸುರಿಯುತ್ತಿರುವುದರಿಂದ ತೋಡಿನಲ್ಲಿ ನೀರಿನ ಹರಿವು ಹೆಚ್ಚಿದೆ. ತೋಡಿನ ಸುತ್ತ ಕೃಷಿ ಭೂಮಿ ಇದ್ದು, ಮಳೆ ಜೋರಾಗಿ ಸುರಿಯುವುದರಿಂದ ಸಮೀಪದಲ್ಲೇ ಇರುವ ಮನೆಗಳಿಗೆ ಅಪಾಯ ಭೀತಿ ಇದೆ.

ಕೃಷಿ ಭೂಮಿಗೂ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದ್ದು, ಇಲ್ಲಿನ ಅಡ್ವೆ ಗರಡಿ ಬಳಿಯ ಕೈಯ್ಯನು ಪೂಜಾರ‌್ತಿ ಕುಟುಂಬಿಕರಿಗೆ ಸೇರಿದ ಮನೆಯ ತಡೆಗೋಡೆ ಅಪಾಯದಲ್ಲಿದೆ. ಈ ತಡೆಗೋಡೆ ಕುಸಿದರೆ ಈ ಪ್ರದೇಶ ಸಂಪೂರ್ಣ ಮುಳುಗಡೆಯಾಗುವ ಭೀತಿ ಇದೆ ಎಂದು ಪದ್ಮನಾಭ ಸುವರ್ಣ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.