ADVERTISEMENT

ರೈತರ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 11:00 IST
Last Updated 2 ಮೇ 2011, 11:00 IST

ಉಡುಪಿ : ಜಿಲ್ಲೆಯ ಎಲ್ಲಾ ಮೂರು ತಾಲ್ಲೂಕುಗಳ ಎಪಿಎಂಸಿ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ಬಿಜೆಪಿ ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದ್ದು, ಎಪಿಎಂಸಿ ಜಯವು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿ ಬಲಗೊಳ್ಳುತ್ತಿರುವುದರ ಸಂಕೇತ ಎಂದು ಜಿಲ್ಲಾ ಘಟಕದ ಅಧ್ಯಕ್ಷ  ಉದಯ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮೀಣ ರೈತರು ಹಿಂದೆ ಕಂಡು ಕೇಳರಿಯದಷ್ಟು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಐತಿಹಾಸಿಕ ಕೃಷಿ ಬಜೆಟ್‌, ರೈತರಿಗೆ ಶೇಕಡಾ 1ರ ಬಡ್ಡಿ ದರದಲ್ಲಿ ಸಾಲ ದೇಶದಲ್ಲೇ ಸರ್ವ ಪ್ರಥಮ. ಸುವರ್ಣ ಭೂಮಿ ಯೋಜನೆಗೂ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಅರ್ಹ ಜಯ ಲಭಿಸಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಹಿರಿಯ ಕೃಷಿಕರು ಮತ್ತು ಕೃಷಿತಜ್ಞರ ಮಾರ್ಗದರ್ಶನ ಪಡೆದು ಎಲ್ಲಾ ಮೂರು ಎ.ಪಿ.ಎಂ.ಸಿ.ಗಳನ್ನು ಸಕ್ರಿಯವಾಗಿ ರೈತರ ಚಟುವಟಿಕೆಗಳಲ್ಲಿ ತೊಡಗಿಸಲಾಗುವುದು. ಉಡುಪಿ ಜಿಲ್ಲೆಯಲ್ಲಿ ಸಾವಯವ ಮತ್ತಿತರ ಕೃಷಿ ಚಟುವಟಿಕೆಗಳನ್ನು ಹೆಚ್ಚು ಹೆಚ್ಚಾಗಿ ಕೈಗೊಳ್ಳಲು ರೈತರಿಗೆ ಎ.ಪಿ.ಎಂ.ಸಿ. ಮೂಲಕ ಪ್ರೋತ್ಸಾಹ ನೀಡುವತ್ತ ಪಕ್ಷ ಮುತುವರ್ಜಿ ವಸಲಿದೆ. ರೈತರ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.