ADVERTISEMENT

ರೈತರ ಹಿತ ಮರೆತ ಸರ್ಕಾರ–ನಳೀನ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:29 IST
Last Updated 7 ಜನವರಿ 2014, 6:29 IST

ಕೋಟ (ಬ್ರಹ್ಮಾವರ): ಭಯೋತ್ಪಾದಕ ಕಾರ್ಯ­ಗಳಿಗೆ ಪ್ರೇರಣೆ ನೀಡುತ್ತಾ, ರೈತರನ್ನು ಹೊಡೆಯುವ ಕಾರ್ಯ ಕಾನೂನಿನ ಮುಖಾಂತರ ಮಾಡುತ್ತಿರುವ ಯುಪಿಎ ಸರ್ಕಾರ ರೈತರ ಹಿತವನ್ನು ಮರೆತು ಕೇವಲ ರೈತರ ಮತಕ್ಕಾಗಿ ಆಸೆ ಪಟ್ಟಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷ ಹೆಜಮಾಡಿಯಿಂದ ಬೈಂದೂರಿನವರೆಗೆ ಆಯೋಜಿ­ಸಿದ್ದ ಜನಾಂದೋಲನ ಪಾದಯಾತ್ರೆ ಸಭೆಯಲ್ಲಿ ಕೋಟ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿದ ಅವರು ಅಡಿಕೆ ನಿಷೇಧ, ನಿಧಾನ ಗತಿಯ ಹೆದ್ದಾರಿ ಕಾಮಗಾರಿ, ಕರಾವಳಿಯಲ್ಲಿ ಉಗ್ರಗಾಮಿ ಚಟುವಟಿಕೆ ಹಾಗೂ ಇನ್ನಿತರ ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿದರು.

ಬಿಜೆಪಿ ಸರ್ಕಾರ ಹೇರಿದ್ದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಅಧಿಕಾರ ಬಂದ ನಂತರ ಹಿಂತೆಗೆದುಕೊಂಡು ಗೋವುಗಳನ್ನು ಕದಿಯುವವರಿಗೆ ಸರ್ಕಾರ ಸಹಕರಿಸುತ್ತಿದೆ. ಅಡಿಕೆ ವಿಷಕಾರಿ ವಸ್ತು ಎಂದು ದಾವೆ ಸಲ್ಲಿಸಿ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ ಅಲ್ಲದೇ,  ಸಂಸ್ಕಾರ ಸಂಪ್ರದಾಯಕ್ಕೆ ಬಳಸಲಾಗುತ್ತಿದ್ದ ಅಡಿಕೆ ಮಾನವನ್ನು ಹರಾಜು ಹಾಕಲು ಕಾಂಗ್ರೆಸ್ ಪ್ರಯತ್ನಿಸಿದೆ. ದೇಶದಲ್ಲಿ ವಿಷಕಾರಿ ವಸ್ತುಗಳನ್ನು ನಿಷೇಧಪಡಿಸುವ ಮೊದಲು ಕಾಂಗ್ರೆಸ್ ಎನ್ನುವ ವಿಷವನ್ನು ನಿಷೇಧಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಹಿಂದೆ ರಾಜ್ಯ ಸರ್ಕಾರ ನೀಡಿದ ವರದಿಯ ಆಧಾರದ ಮೇಲೆ ಅಡಿಕೆ ವಿಷ ವಸ್ತು ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಅಡಿಕೆ ನಿಷೇಧದ ಬಗ್ಗೆ ಬಿಜೆಪಿ ಈ ಹಿಂದೆ ನಿಷೇಧ ಹೇರಿದೆ ಎನ್ನುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಸುಮ್ಮನೆ ಅಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ತಲೆಯಲ್ಲಿ ಮೆದುಳಿಲ್ಲದ ಸರ್ಕಾರ ಎನ್ನುವ ಮಾತನ್ನು ನಿಜ ಮಾಡಬೇಡಿ ಎಂದು ಲೇವಡಿ ಮಾಡಿದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ಗೀತಾಂಜಲಿ ಸುವರ್ಣ, ಕೀಶೊರ್ ಕುಮಾರ್ ಕುಂದಾಪುರ, ನ್ಯಾಯವಾದಿ ಎಮ್.ಕೆ.ವಿಜಯ್ ಕುಮಾರ್, ವಿಕಾಸ್ ಪುತ್ತೂರು, ಉದಯಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಾಬುಕಳಕ್ಕೆ ಆಗಮಿಸಿದ ಪಾದಯಾತ್ರೆಯನ್ನು ಗೋ ಪೂಜೆ ಮಾಡುವುದರ ಮೂಲಕ ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT