ADVERTISEMENT

‘ಹುಲಿರಕ್ಷಣೆ’ಗೆ ಕುಂದಾಪುರ ಕಲಾಕ್ಷೇತ್ರದ ಪ್ರಯತ್ನ

ರಾಜೇಶ್‌ ಕೆ.ಸಿ
Published 2 ಅಕ್ಟೋಬರ್ 2017, 9:56 IST
Last Updated 2 ಅಕ್ಟೋಬರ್ 2017, 9:56 IST
ಕುಂದಾಪುರದ ಸರ್ಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ಗುರುವಾರ ಸಂಜೆ ನಡೆದ ಹುಲಿ ವೇಷ ಕುಣಿತ ಸ್ವರ್ಧೆಯಲ್ಲಿ ಭಾಗವಹಿಸಿದ ತಂಡವೊಂದರ ಆಕರ್ಷಕ ಕುಣಿತ.
ಕುಂದಾಪುರದ ಸರ್ಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ಗುರುವಾರ ಸಂಜೆ ನಡೆದ ಹುಲಿ ವೇಷ ಕುಣಿತ ಸ್ವರ್ಧೆಯಲ್ಲಿ ಭಾಗವಹಿಸಿದ ತಂಡವೊಂದರ ಆಕರ್ಷಕ ಕುಣಿತ.   

ಕುಂದಾಪುರ: ಅಳಿಯುತ್ತಿರುವ ಪಾರಂಪರಿಕ ಕಲೆಯೊಂದರ ಉಳಿಯುವಿಕೆಗಾಗಿ ಹಾಕಿಕೊಂಡ ಕಾರ್ಯಕ್ರಮ ಹೇಗಾಗುತ್ತದೋ ಎನ್ನುವ ಆತಂಕ. ಮುಖ ವರ್ಣಿಕೆ ಕಲಾವಿದರು ಯಾವಾಗ ನನ್ನ ಮುಖಕ್ಕೆ ಬಣ್ಣದ ಕುಂಚವನ್ನು ಸ್ಪರ್ಶಿಸುತ್ತಾರೆ ಎನ್ನುವ ಚಿಣ್ಣರ ಕೌತುಕ. ಪಾರಂಪರಿಕ ವಾದ್ಯಗಳಾದ ತಾಸಿ ಹಾಗೂ ಸುತ್ತಿ ಮೋರೆಯ ಶಬ್ದಕ್ಕೆ ಹೆಜ್ಜೆ ಹಾಕುವ ಸಂಭ್ರಮ ಈ ಎಲ್ಲ ದೃಶ್ಯಗಳು ಕಾಣಸಿದ್ದು ಗುರುವಾರ ಸಂಜೆ ಇಲ್ಲಿನ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಮೈದಾನದಲ್ಲಿ.

ನೂರಾರು ವರ್ಷಗಳ ಇತಿಹಾಸ ಹಾಗೂ ಪಾರಂಪರಿಕ ಹಿನ್ನೆಲೆಯುಳ್ಳ ಕುಂದಾಪುರದ ಹುಲಿ ವೇಷ ಈಚೆನ ವರ್ಷಗಳಲ್ಲಿ ವಿರಳವಾಗುತ್ತಿರುವುದನ್ನು ಕಂಡಿದ್ದ ಇಲ್ಲಿನ ಕಲಾಕ್ಷೇತ್ರ ಸಂಘಟನೆ ಕಳೆದ 5 ವರ್ಷಗಳಿಂದ ಈ ಕಲೆ ನಶಿಸ ಬಾರದು ಎನ್ನುವ ಸದುದ್ದೇಶದಿಂದ ಪ್ರತಿ ಬಾರಿಯ ನವರಾತ್ರಿಯ ಉತ್ಸವದ ಸಂಭ್ರಮದಂದು ಕಲೆಯ ಉಳಿವಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಹುಲಿ ವೇಷಧಾರಿಗಳ ಕುಣಿತದ ಸ್ಪರ್ಧೆ, ಮಕ್ಕಳಿಗೆ ಹುಲಿ ವೇಷದ ಮುಖ ವರ್ಣಿಕೆಯ ಅವಕಾಶ, ಹುಲಿ ವೇಷಧಾರಿಗಳಿಗೆ ಆರ್ಥಿಕ ಸಹಾಯ ನೀಡುವುದು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡುತ್ತಿದೆ. ಕಲಾಕ್ಷೇತ್ರದ ಈ ಪ್ರಯತ್ನಕ್ಕೆ ಇಲ್ಲಿನ ಸಾಧನ ಸಂಗಮ ಟ್ರಸ್ಟ್‌ ಕೂಡ ಸಾಥ್‌ ನೀಡುತ್ತಿದೆ.

ADVERTISEMENT

ಕುಂದಾಪುರದ ಹುಲಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಹಾಗೂ ಉಡುಪಿ ಭಾಗದ ಹುಲಿಗಳ ವೇಷ ಹಾಗೂ ಕುಣಿತಕ್ಕೂ ಕುಂದಾಪುರ ಭಾಗದ ಹುಲಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಹುಲಿ ವೇಷಧಾರಿಗಳು ವೇಷಧಾರಣೆಯ ಮೊದಲು ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸ ಬೇಕಾಗುತ್ತದೆ. ವೇಷಧಾರಣೆಯ ಮೊದಲ ಕೆಲ ದಿನಗಳು ಹಿರಿಯ ವೇಷಧಾರಿಗಳಿಂದ ಕುಣಿತದ ಅಭ್ಯಾಸವನ್ನು ನಡೆಸಿ ಸಿದ್ಧತೆಯನ್ನು ಮಾಡಿಕೊಂಡ ಬಳಿಕ ವೇಷಧಾರಿಗಳು ಬರಿ ಮೈಗೆ ಆಯಿಲ್‌ ಪೈಂಟ್‌ ಹಚ್ಚಿ ಹುಲಿಯ ರೂಪವನ್ನು ತಾಳುತ್ತಾರೆ.

ಈ ಭಾಗದ ಪಾರಂಪರಿಕ ವಾದ್ಯಗಳಾದ ತಾಸಿ (ತಾಸ್ಮಾರ್), ಸುತ್ತಿ (ನಾದ ಸ್ವರ), ಮೋರೆ (ಶಂಖ), ಡೋಲು ಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ವೇಷಧಾರಿಗಳ ಕುಣಿತಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಾಮೂಲಿ ಹೆಜ್ಜೆಗಳಲ್ಲದೆ, ಮೂರು ಪೆಟ್ಟು ಕುಣಿತ ಎನ್ನುವ ವಿಶಿಷ್ಟ ಹೆಜ್ಜೆಗಳ ಕುಣಿತಗಳು ಇಲ್ಲಿವೆ.

ಹುಲಿ ವೇಷಗಳ ತಂಡದೊಂದಿಗೆ ಹೂವಿನ ಆಕರ್ಷಕವಾದ ಗೊಂಡೆ ಹಾಗೂ ಹುಲಿಯ ಬೇಟೆಗಾರನೂ ಜತೆಯಲ್ಲಿ ಇರುತ್ತಾನೆ. ಬಟ್ಟೆ ಮಳಿಗೆಗಳ ಎದುರು ಬರುವ ಹುಲಿ ತಂಡಗಳ ಗೊಂಡೆಗಳಿಗೆ ಬಟ್ಟೆಗಳನ್ನು ಕಟ್ಟುವ ಪದ್ದತಿಗಳಿವೆ. ಕೋವಿ ಹಿಡಿದು ಕುಣಿತದ ಕೊನೆಯಲ್ಲಿ ಡಂ ಪುಸ್ಕ್‌ ಎಂದು ರಂಜಿಸುವ ಬೇಟೆಗಾರನ ಆಟೋಟಗಳನ್ನು ನೋಡುವುದೆ ಚಿಣ್ಣರಿಗೆ ಹಬ್ಬ.

ಪ್ರಸಿದ್ದ ಹುಲಿ ವೇಷಧಾರಿಗಳು: ವರ್ಷದ ನವರಾತ್ರಿಯ ಹಬ್ಬಕ್ಕಾಗಿ ಸೇವೆಯ ರೂಪದಲ್ಲಿ ವೇಷ ಹಾಕುವ ಹೆಚ್ಚಿನ ವೇಷಧಾರಿಗಳು ಕೆಲವೇ ಕುಟುಂಬಗಳಿಗೆ ಸೀಮಿತರಾದವರು ಎನ್ನುವುದು ಇಲ್ಲಿನ ವಿಶೇಷ. ಹಿಂದೆಲ್ಲ ವೇಷಧಾರಿಗಳನ್ನು ಗುರುತಿಸುವಾಗ ಅವರ ಹೆಸರಿನೊಂದಿಗೆ ಹುಲಿ ಎನ್ನುವ ವಿಶೇಷ ಪದಗಳ್ನು ಸೇರಿಸುತ್ತಿದ್ದರು. ಹುಲಿ ಕೊರಗ, ಹುಲಿ ನಾಗೇಶ, ಹುಲಿ ರಾಜೀವ, ಸೂಂಯ್ಕ್‌ ಯಾನೆ ಸುರೇಂದ್ರ, ಹುಲಿ ಕೃಷ್ಣ, ಹುಲಿ ಮಂಜ್ಯಾತ್‌ (ಮಂಜುನಾಥ) ಸೇರಿಗಾರ್‌, ತೇಜ್‌ಪಾಲ್‌, ಲಕ್ಷಣ, ಟೈಲರ್‌ ನಾಗೇಶ, ಪೈಂಟರ್‌ ಶೇಖರ, ಕಾರ್‌ ಮಂಜುನಾಥ, ರಾಜಾ, ಪ್ರಸನ್ನ, ಪ್ರದೀಪ್, ಪ್ರಶಾಂತ್, ಸಂತೋಷ, ಚರಣ... ಹೀಗೆ ಹಲವು ಪ್ರಸಿದ್ದ ವೇಷಧಾರಿಗಳನ್ನು ಇಲ್ಲಿನ ಜನ ಇಂದಿಗೂ ಗುರುತಿಸುತ್ತಾರೆ.

ಗುರುವಾರ ನಡೆದ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ ಕುಮಾರ, ಉಪಾಧ್ಯಕ್ಷ ಪ್ರವೀಣ್‌ ಕುಮಾರ ಟಿ, ಸಾಧನ ಸಂಗಮ ಟ್ರಸ್ಟ್ ಅಧ್ಯಕ್ಷ ನಾರಾಯಣ ಐತಾಳ್, ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ಶ್ರೀಧರ್ ಶೇರಿಗಾರ್, ಪುಷ್ಪಾ ಶೇಟ್, ಶಕುಂತಲಾ. ಸಿಸಿಲಿ ಕೋಟ್ಯಾನ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಹೆಚ್‌.ಎಸ್‌.ಹತ್ವಾರ್, ದಾಮೋದರ್ ಪೈ, ತ್ರಿವಿಕ್ರಮ ಪೈ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.